ವಾಷಿಂಗ್ಟನ್ : ಹೆಣ್ಣಾಗಿ ಹುಟ್ಟಿದ ಮೇಲೆ ಕೆಲವು ಸಂದರ್ಭಗಳಲ್ಲಿ ಅವಳು ಪುನರ್ಜನ್ಮ ಪಡೆದು ಬಂದಂತ ಅನುಭವ ಹೊಂದಿರುತ್ತಾಳೆ.
ಅದಕ್ಕಾಗಿಯೇ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ತಾಯಿ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳುವುದು.
ಸಾಮಾನ್ಯವಾಗಿ ರಾಜಮನೆತನದವರು ತಮ್ಮ ಕುಟುಂಬದ ವಿಷಯವನ್ನು ಬಹಿರಂಗಗೊಳಿಸುವುದಿಲ್ಲ.
ಆದರೆ ಇದೇ ಮೊದಲ ಬಾರಿಗೆ ತಮಗೆ ಗರ್ಭಪಾತವಾಗಿರುವ ವಿಷಯವನ್ನು ಬ್ರಿಟನ್ ರಾಜಕುಮಾರಿ ಮೇಘನ್ ಮಾರ್ಕೆಲ್ ಬಹಿರಂಗಗಗೊಳಿಸಿದ್ದಾರೆ.
ರಾಜಕುಮಾರ ಹ್ಯಾರಿಯ ಪತ್ನಿಯಾಗಿರುವ ಮೇಘನ್ ಆ ದಿನಗಳಲ್ಲಿ ತಮಗಾಗಿರುವ ಮಾನಸಿಕ ಯಾತನೆಯನ್ನು ತಿಳಿಸಿದ್ದಾರೆ.
ರಾಜಮನೆತನದ ವೈಭೋಗದಿಂದ ಬೇಸತ್ತು ಈ ದಂಪತಿ ಅರಮನೆಯಿಂದ ಹೊರಬಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಸಾಂತಾ ಬಾರ್ಬರಾದಲ್ಲಿ ಸಾಮಾನ್ಯರಂತೆ ಬದುಕು ಸಾಗಿಸುತ್ತಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೊಂದಿಗೆ ತಮ್ಮನಾದ ನೋವನ್ನಾ ಹಂಚಿಕೊಂಡಿದ್ದಾರೆ.
ಹೌದು ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಕಳೆದ ಜುಲೈ ನನ್ನ ಪಾಲಿಗೆ ನೋವು ತಂದ ತಿಂಗಳು ಎಂದಿದ್ದಾರೆ ರಾಜಕುಮಾರಿ.
ಒಂದು ಬೆಳಗ್ಗೆ ಸಹಿಸಲಾರದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.
ನೋವು ತಾಳದೇ ಕುಸಿದು ಬಿದ್ದುಬಿಟ್ಟೆ. ನನ್ನ ಮೊದಲನೇ ಮಗುವನ್ನು ಅಪ್ಪಿಕೊಂಡೆ. ಆಗಲೇ ನನಗೆ ನನ್ನ ಎರಡನೆಯ ಮಗುವನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದು ಭಾಸವಾಗತೊಡಗಿತು ಎಂದಿದ್ದಾರೆ.
ಕುಸಿದು ಬಿದ್ದದ್ದಷ್ಟೇ ಗೊತ್ತು. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ಏನಾಗಿದೆ ಎಂದು ನೋಡುವಷ್ಟರಲ್ಲಿ ನನ್ನ ಪತಿ ಹ್ಯಾರಿ ಕಣ್ಣೀರಾಗಿದ್ದರು.
ಗರ್ಭಪಾತವಾಗಿರುವ ವಿಷಯ ತಿಳಿಸಿದರು. ಇಬ್ಬರು ಸಾಕಷ್ಟು ಅತ್ತೆವು ಎಂದು ರಾಜಕುಮಾರಿ ಹೇಳಿದ್ದಾರೆ.
ಅಷ್ಟಕ್ಕೂ ನಾನು ಈ ವಿಷಯವನ್ನು ಬಹಿರಂಗಪಡಿಸುತ್ತಿರುವ ಕಾರಣವಿಷ್ಟೇ.
ಈ ನೋವನ್ನು ಹಲವಾರು ಮಹಿಳೆಯರು ಅನುಭವಿಸಿರುತ್ತಾರೆ.
ಆದರೆ ನೋವನ್ನು ನುಂಗಿಕೊಂಡು ಬಹಿರಂಗವಾಗಿ ಮಾತನಾಡುವುದೇ ಇಲ್ಲ.
ಗರ್ಭಪಾತದ ಕುರಿತಾಗಿ ಮಾತನಾಡುವುದು ನಿಷಿದ್ಧವಾಗಿದೆ. ಅವಮಾನ, ಆತಂಕ, ಏಕಾಂಗಿತನ, ಮಾತೃ ಶೋಕ ಅನುಭವಿಸುವುದು ಮುಂದುವರೆಯುತ್ತಲೇ ಸಾಗಿದೆ.
ಹೀಗಾಗಬಾರದು ಮಹಿಳೆಯರು ತಮ್ಮ ದುಃಖವನ್ನು ಹೊರಹಾಕುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
PublicNext
26/11/2020 11:32 pm