ಧಾರವಾಡ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಅದರ ಹೊಟ್ಟೆಯೊಳಗಿನ 10 ಕ್ಯಾನ್ಸರ್ ಗಡ್ಡೆಗಳನ್ನು ಹೊರತೆಗೆಯುವಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ.ಅನಿಲ್ ಕುಮಾರ್ ಪಾಟೀಲ್ ಮತ್ತು ತಂಡ ಯಶಸ್ವಿಯಾಘಿದೆ.
ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಲಾಬೋಡಾರ್ ಎಂಬ ನಾಯಿ ಈ ವಿಶೇಷ ಚಿಕಿತ್ಸೆಗೆ ಒಳಗಾಗಿದೆ.
ಈ ಶ್ವಾನವು ಅಬ್ಡೋಮಿನಲ್ ಟ್ಯೂಮರ್(ಕ್ಯಾನ್ಸರ್ ಗಡ್ಡೆ) ಕಾಯಿಲೆಗೆ ತುತ್ತಾಗಿತ್ತು. ಇದೇ ನಾಯಿಗೆ ಒಂದೂವರೆ ವರ್ಷ ಇದ್ದಾಗಲೂ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ 10 ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡು ಶಸ್ತ್ರಕ್ರಿಯೆಗೆ ಒಳಗಾಗಿದೆ.
ಹತ್ತು ದಿನಗಳಿಂದ ನಾಯಿ ಯಾವುದೇ ಆಹಾರ ಸೇವಿಸದೆ ಒದ್ದಾಡುತ್ತಿತ್ತು. ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ಗುರುವಾರ ಬೆಳ್ಳಂಬೆಳಗ್ಗೆ ನಾಯಿ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಡಾ.ಅನಿಲ್ ಕುಮಾರ್ ಬಳಿ ತರಲಾಗಿತ್ತು.
ಈ ವೇಳೆ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿತ್ತು. ಆಗ ಆಸ್ಪತ್ರೆಯಲ್ಲಿ ಇದ್ದ ಉಪಕರಣಗಳಲ್ಲೇ ಸತತ 3 ಗಂಟೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಡಾ. ಅನಿಲಕುಮಾರ್ ನೇತೃತ್ವದ ತಂಡ ಹೊಸ ದಾಖಲೆ ಬರೆದಿದೆ.
ನಾಯಿಗಳ ಹೊಟ್ಟೆಯಲ್ಲಿ ಗಡ್ಡೆಗಳು ಬೆಳೆಯುವುದು ಸಾಮಾನ್ಯ. ಆದರೂ 10 ಗಡ್ಡೆಗಳು ಬೆಳೆಯುವುದು ಅಪರೂಪ. ಇಂತಹ ಕ್ಲಿಷ್ಟಕರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ಪ್ರಶಂಸೆಗೆ ಪಾತ್ರವಾಗಿದೆ.
PublicNext
08/01/2021 03:26 pm