ಯಾದಗಿರಿ: ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದ ಪರಿಣಾಮ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಕೊವೀಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸೋಂಕು ತಗುಲಿದ್ದ ನರ್ಸ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಯಾದಗಿರಿ ತಾಲೂಕಿನ ಕೌಳ್ಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೀತಾ (34) ಹೆಮ್ಮಾರಿಗೆ ಬಲಿಯಾದವರು. ಅವರು 12 ವರ್ಷದಿಂದ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಕಳೆದ ಸೆಪ್ಟೆಂಬರ್ 19ರಂದು ಕೊರೊನಾ ದೃಢವಾಗಿತ್ತು. ಹೀಗಾಗಿ ಅವರನ್ನು ಯಾದಗಿರಿ ಹೊರವಲಯದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಹು ಬೇಗನೆ ಬಿಡುಗಡೆಯಾಗಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ಗೀತಾ ಅವರಿಗೆ ಮತ್ತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆ ಸೆಪ್ಟೆಂಬರ್ 29ರಂದು ಎರಡನೇ ಬಾರಿಗೆ ಕೊರೊನಾ ದೃಢವಾಗಿತ್ತು. ಮತ್ತೆ ಯಾದಗಿರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೀತಾ ಅವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗೀತಾ ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುವಾಗ ಅವರ ಸಂಬಂಧಿಕರ ಹಾಗೂ ಸಹ ಸಿಬ್ಬಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಕೊರೊನಾ ವಾರಿಯರ್ ಗೀತಾ ಸಾವಿಗೆ ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಸಚಿವರು, ಗೀತಾ ಅವರ ಕುಟುಂಬಕ್ಕೆ ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸುವ ಭರವಸೆ ನೀಡಿದ್ದಾರೆ.
PublicNext
01/10/2020 06:10 pm