ಬೆಂಗಳೂರು: ಕಿರಾತಕ, ರಜನಿ ಕಾಂತ ಸೇರಿದಂತೆ ಅನೇಕ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ (46) ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಡಯಾಬಿಟಿಸ್ನಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಫಲಿಸದೆ ಅವರು ಇಂದು (ಜ.20) ನಸುಕಿನ ಜಾವ 3 ಗಂಟೆ ಸುಮಾರಿಗೆ ಪಾಂಡಿಚೇರಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಧ್ಯಾಹ್ನ ಹೊತ್ತಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸಹೋದರ ಪ್ರಶಾಂತ್ ರಾಜ್ ಮಾಹಿತಿ ನೀಡಿದ್ದಾರೆ.
ಯಶ್ ಅಭಿನಯದ ‘ಕಿರಾತಕ’ ಚಿತ್ರಕ್ಕೆ ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದರು. ಆ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿತ್ತು. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು. ಸತೀಶ್ ನೀನಾಸಂ ನಟನೆಯ ‘ಅಂಜದ ಗಂಡು’, ಕಾರ್ತಿಕ್ ಜಯರಾಮ್, ಚಿಕ್ಕಣ್ಣ ಮುಂತಾದವರು ಅಭಿನಯಿಸಿದ್ದ ‘ಬೆಂಗಳೂರು 560023’, ದುನಿಯಾ ವಿಜಯ್ ನಟನೆಯ ‘ರಜನಿ ಕಾಂತ’ ಇತ್ಯಾದಿ ಸಿನಿಮಾಗಳಿಗೆ ಅವರ ನಿರ್ದೇಶನವಿತ್ತು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
PublicNext
20/01/2022 10:09 am