ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆ ನಿನ್ನೆ 33 ಸಾವಿರಕ್ಕೆ ಸಮೀಪಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರವು ಆಸ್ಪತ್ರೆಗೆ ದಾಖಲಾಗಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಡ್ಡಾಯವಾಗಿ ಈ ನಿಯಮಗಳನ್ನು ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೆ ಆಸ್ಪತ್ರೆಗಳಿಗೆ ತೆರಳಬೇಕು. ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳಿದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರವು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊರರೋಗಿಗಳು, ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವವರು, ಹಲ್ಲಿನ ಚಿಕಿತ್ಸೆ ಪಡೆಯುವವರು ಸೇರಿದಂತೆ ಇನ್ನಿತರ ರೋಗಿಗಳು ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸರ್ಕಾರ ತಿಳಿಸಿದೆ.
ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ನಿನ್ನೆ (ಶನಿವಾರ) 32,793 ಜನರಿಗೆ ಕೊರೊನಾ ದೃಢಪಟ್ಟಿದ್ದು, ಈವರೆಗೂ 31,86,040 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನು ಪಾಸಿಟಿವಿಟಿ ದರ ಶೇ 15ಕ್ಕೆ ಏರಿಕೆ ಕಂಡಿದೆ. ಇಂದು 2,18,479 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಇದೇ ಸಮಯದಲ್ಲಿ ರಾಜ್ಯದಲ್ಲಿ 4,273 ಜನ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 29,77,743 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇಂದು ಡೆಡ್ಲಿ ಸೋಂಕಿಗೆ 7 ಜನರು ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 38,418ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 1,69,850 ಸಕ್ರಿಯ ಪ್ರಕರಣಗಳಿವೆ. ಇನ್ನು ಮರಣ ಪ್ರಮಾಣ 0.02ನಷ್ಟಿದೆ.
PublicNext
16/01/2022 07:30 am