ದಾವಣಗೆರೆ: ಇಷ್ಟು ದಿನ ತಣ್ಣಗಿದ್ದ ಕೊರೊನಾ ವೈರಸ್ ಹೆಮ್ಮಾರಿ ಮತ್ತೆ ಆರ್ಭಟಿಸತೊಡಗಿದೆ. ಜಿಲ್ಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಕಾಡುತ್ತಿರುವುದು ಚಿಂತೆಗೀಡು ಮಾಡಿದೆ. ಇದು ಪೋಷಕರಿಗೆ ಆತಂಕ ತಂದಿದೆ.
ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ಪ್ರಾಂಶುಪಾಲರೂ ಸೇರಿದಂತೆ 32 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಇದ್ದದ್ದು ದೃಢಪಟ್ಟಿತ್ತು.ಆ ಬಳಿಕ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ ಮತ್ತೆ 23 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಖಚಿತಪಟ್ಟಿದ್ದು, ಈ ಮೂಲಕ ಇಂದಿರಾ ಗಾಂಧಿ ವಸತಿ ಶಾಲೆಯ 54 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ವಸತಿ ಶಾಲೆಯಲ್ಲಿ 129 ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದುವರೆಗೆ ಹಾಸ್ಟೆಲ್ ನಲ್ಲಿ ಇರೋ 231 ಮಕ್ಕಳಿಗೆ ಆರ್ ಟಿಪಿ ಸಿಆರ್ ಟೆಸ್ಟ್ ಮಾಡಲಾಗಿತ್ತು.
ಜಿಲ್ಲೆಯ ಜಗಳೂರು ಪಟ್ಟಣದ ಖಾಸಗಿ ಪ್ರೌಢಶಾಲೆಯೊಂದರ ಆರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ಶಾಲೆಯ 195 ವಿದ್ಯಾರ್ಥಿಗಳನ್ನು ಟೆಸ್ಟ್ ಮಾಡಲಾಗಿದ್ದು, ಎಲ್ಲರನ್ನೂ ಹೋಂ ಐಸೋಲೇಷನ್ ನಲ್ಲಿಡಲಾಗಿದೆ. ಒಂದು ವಾರದವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ.
PublicNext
12/01/2022 11:05 am