ಬೆಂಗಳೂರು: ಮಾರಕ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಆರ್ಭಟ ಶುರುವಾಗಿದೆ. ರಾಜ್ಯಕ್ಕೂ ಈ ಹೊಸ ವೈರಸ್ ಕಾಲಿಟ್ಟಿದೆ. ಕರ್ನಾಟಕದಲ್ಲಿ ಮೊದಲ ಎರಡು ಒಮಿಕ್ರಾನ್ ಕೇಸ್ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಎರಡು ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಸೌತ್ ಆಫ್ರಿಕಾ ಮೂಲದ 66 ವರ್ಷದ ವ್ಯಕ್ತಿ ನವೆಂಬರ್ 20ರಂದು ನಗರಕ್ಕೆ ಆಗಮಿಸಿದ್ದರು. ಆತನ ಜೈವಿಕ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ನಲ್ಲಿ ಕಳಿಸಲಾಗಿತ್ತು. ಅವರು ರಿಪೋರ್ಟ್ ಓಮಿಕ್ರಾನ್ ತಗುಲಿರುವುದು ದೃಢಪಟ್ಟಿದೆ. ಅವರು ಖಾಸಗಿ ಹೋಟೆಲ್‌ನಲ್ಲಿ ಐಸೋಲೇಟ್ ಆಗಿದ್ದರು. ಇವರಿಗೆ 24 ಪ್ರೈಮರಿ ಸಂಪರ್ಕವಿದ್ದು, 240 ಸೆಕೆಂಡರಿ ಸಂಪರ್ಕ ಪತ್ತೆಯಾಗಿದೆ. ಇವರೆಲ್ಲರನ್ನೂ ಹೋಮ್ ಐಸೋಲೇಷನ್‌ನಲ್ಲಿ ಇಡಲಾಗಿತ್ತು. ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ. ಇತ್ತ ಓಮಿಕ್ರಾನ್ ದೃಢಪಟ್ಟ 66 ವರ್ಷದ ವ್ಯಕ್ತಿ ನವೆಂಬರ್ 27ರಂದು ಮರಳಿ ದುಬೈಗೆ ಹೋಗಿದ್ದಾರೆ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.
ಮತ್ತೋರ್ವ ಓಮಿಕ್ರಾನ್ ಸೋಂಕಿತ ವ್ಯಕ್ತಿ 45 ವರ್ಷದವರಾಗಿದ್ದು, ಅವರಿಗೆ ನವೆಂಬರ್ 22ರಂದು ಟೆಸ್ಟ್ ಮಾಡಲಾಗಿತ್ತು. ಅವರಿಗೆ 13 ಪ್ರೈಮರಿ ಸಂಪರ್ಕವಿದ್ದು, ಅವರಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಇನ್ನು ಸೆಕೆಂಡರಿ ಸಂಪರ್ಕದಲ್ಲಿದ್ದ 205 ಜನರ ಪೈಕಿ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಎಲ್ಲರನ್ನೂ ಐಸೋಲೇಟ್‌ನಲ್ಲಿ ಇಡಲಾಗಿದೆ. ಇವರೆಲ್ಲರ ಸ್ಯಾಂಪಲ್ಸ್ ಅನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಓಮಿಕ್ರಾನ್ ದೃಢಪಟ್ಟ 45 ವರ್ಷದ ವ್ಯಕ್ತಿ ಬೆಂಗಳೂರು ನಿವಾಸಿಯಾಗಿದ್ದಾರೆ. ಅವರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಇವರಿಗೆ ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.
PublicNext
02/12/2021 06:39 pm