ಪಣಜಿ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಕೈಗೊಂಡಿದ್ದ ಬೃಹತ್ ಲಸಿಕೆ ಅಭಿಯಾನದಲ್ಲಿ ಬರೋಬ್ಬರಿ 2.50 ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ಲಸಿಕೆ ನೀಡಿಕೆಯಲ್ಲಿ ಭಾರತ ಹೊಸ ದಾಖಲೆ ಬರೆದಿದೆ. 'ನನ್ನ 71ನೇ ಜನ್ಮದಿನದಂದು ದೇಶದಾದ್ಯಂತ 2.50 ಕೋಟಿ ಡೋಸ್ಗಳಷ್ಟು ಕೋವಿಡ್ ಲಸಿಕೆಗಳನ್ನು ನೀಡಿರುವುದು ನನಗೆ ಮರೆಯಲಾಗದ ಮತ್ತು ಭಾವನಾತ್ಮಕ ಕ್ಷಣ' ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.
ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ, 'ನಿಮ್ಮೆಲ್ಲರ ಪ್ರಯತ್ನದಿಂದಾಗಿ ಒಂದೇ ದಿನದಲ್ಲಿ 2.5 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡುವ ಮೂಲಕ ಭಾರತದ ವಿಶ್ವದಾಖಲೆ ಸೃಷ್ಟಿಸಿದೆ. ಅತ್ಯಂತ ಶಕ್ತಿ ಶಾಲಿ ಎನಿಸಿಕೊಳ್ಳುವ ರಾಷ್ಟ್ರಗಳು ಈವರೆಗೂ ಇಂಥದ್ದೊಂದು ಸಾಧನೆ ಮಾಡಲು ಸಾಧ್ಯವಾಗಿಲ್ಲ' ಎಂದು ಪ್ರಶಂಸಿಸಿದರು.
'ನಿನ್ನೆ ಇಡೀ ರಾಷ್ಟ್ರದ ಕಣ್ಣು ಕೋವಿನ್ ಪೋರ್ಟ್ಲ್ ನ ಡ್ಯಾಷ್ಬೋರ್ಡ್ ನಲ್ಲಿ ಬದಲಾಗುತ್ತಿದ್ದ ದತ್ತಾಂಶಗಳ ಮೇಲೆ ನೆಟ್ಟಿತ್ತು. ಆ ಪ್ರಕಾರ ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆಗಳನ್ನು ಪಡೆದಿದ್ದಾರೆ. ಪ್ರತಿ ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಪ್ರತಿ ಸೆಕೆಂಡಿಗೆ 425ಕ್ಕೂ ಹೆಚ್ಚು ಮಂದಿ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ' ಎನ್ನುತ್ತಾ ಮೋದಿಯವರು ಅಂಕಿ ಅಂಶಗಳ ಸಹಿತ ಲಸಿಕೆ ಅಭಿಯಾನದ ವೇಗವನ್ನು ಉಲ್ಲೇಖಿಸಿದರು.
'ಇಂಥದ್ದೊಂದು ಉತ್ತಮ ಪ್ರಯತ್ನಕ್ಕಾಗಿ ದೇಶದ ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿದಲ್ಲಿರುವ ಸಿಬ್ಬಂದಿಯನ್ನು ನಾನು ಪ್ರಶಂಸಿಸುತ್ತೇನೆ' ಎಂದು ಮೋದಿ ಹೇಳಿದರು. ಇಂಥದ್ದೊಂದು ಕಾರ್ಯವನ್ನು ಯಶಸ್ವಿ ಗೊಳಿಸಲು ಬೇಕಾದ ಬಹುದೊಡ್ಡ ಪ್ರಯತ್ನ ಹಾಗೂ ನುರಿತ ಮಾನವ ಸಂಪನ್ಮೂಲ ಭಾರತದಲ್ಲಿದೆ ಎಂಬುದು ಸಾಬೀತಾಯಿತು' ಎಂದು ಅವರು ಹೇಳಿದರು.
'ಜನ್ಮದಿನಗಳು ಬರುತ್ತವೆ, ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರವಿರುತ್ತೇನೆ. ಆದರೆ ನಿನ್ನೆಯ ದಿನ ಮಾತ್ರ ನನಗೆ ತುಂಬಾ ಭಾವನಾತ್ಮಕವಾಗಿತ್ತು. ಇದು ಮರೆಯಲಾಗದ ದಿನವೂ ಹೌದು' ಎಂದರು.
PublicNext
18/09/2021 03:06 pm