ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರೆವೈದ್ಯಕೀಯ (Para Medical ) ವಿದ್ಯಾರ್ಥಿಗಳಿಗೊಂದು ಕನ್ನಡದ ಕೈಗನ್ನಡಿ!

ಸಮಾಜಕ್ಕೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು, ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ಮರುಜೀವ ನೀಡಬೇಕು ಎಂದು ಸಾವಿರಾರು ವೈದ್ಯರು ತಮ್ಮ ಬದುಕನ್ನೇ ಮೀಸಲಿಟ್ಟಿರುತ್ತಾರೆ. ಅದಕ್ಕಾಗಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿರುತ್ತಾರೆ.

ಆದರೆ ಇಂಥ ವೈದ್ಯರ ಸೇವೆಗೆ ಸದಾ ಬೆನ್ನೆಲುಬಾಗಿ ನಿಲ್ಲುವವರು, ಅವರ ಸಲಹೆಯಂತೆ ರೋಗಿಗಳ ಆರೈಕೆಯಲ್ಲೇ ಬದುಕಿನ ಸಾರ್ಥಕತೆ ಕಂಡವರು ಎಲೆ ಮರೆಯ ಕಾಯಿಯಂತೆ ಆರೋಗ್ಯ ಸೇವೆಗೊಂದು ಭದ್ರ ಬುನಾದಿ ಒದಗಿಸುವವರು ನರ್ಸ್ ಗಳು ಎಂಬುದನ್ನು ಮರೆಯುವಂತಿಲ್ಲ.

ಹೌದು, ಈ ದಾದಿಯರು ಅಥವಾ ಶುಶ್ರೂಷಕರ ಸೇವೆ ಇಲ್ಲದ ವೈದ್ಯಕೀಯ ಕ್ಷೇತ್ರವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಇಂಥ ಶುಶ್ರೂಷಕರ ಸೇವೆಯನ್ನು ಇನ್ನಷ್ಟು ಬಲಪಡಿಸಬೇಕು, ತಿಳಿಗನ್ನಡದಲ್ಲೇ ಆರೋಗ್ಯದ ಎಲ್ಲ ವಿಷಯಗಳನ್ನು ತಿಳಿಸಬೇಕು, ಆರೋಗ್ಯ ಕ್ಷೇತ್ರಕ್ಕೊಂದು ಗಟ್ಟಿಮುಟ್ಟಾದ ಅಡಿಪಾಯ ಹಾಕಬೇಕು ಎಂಬ ಪರಿಕಲ್ಪನೆಯಲ್ಲಿ ಬಾಗಲಕೋಟೆ ವೈದ್ಯರೊಬ್ಬರು ಒಂದು ಅಪರೂಪದ ಅಂಡ್ರಾಯಿಡ್ ಅಪ್ಲಿಕೇಶನ್ ವೊಂದನ್ನು ರೂಪಿಸಿದ್ದಾರೆ.

ಅದೇ preped.in ಆ್ಯಪ್. ಇದು ನರ್ಸಿಂಗ್ ಅಥವಾ ಅರೆವೈದ್ಯಕೀಯ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಕನ್ನಡದ ಕೈಗನ್ನಡಿಯಾಗಿದೆ. ನರ್ಸಿಂಗ್ ಕೋರ್ಸ್ ನ ಹಲವು ಕ್ಲಿಷ್ಟಕರ ವಿಷಯಗಳನ್ನು ಆಡುಭಾಷೆ ಕನ್ನಡದಲ್ಲೇ ತಿಳಿಸುವ ಅಪರೂಪದ ಸಾಧನವಾಗಿದೆ.

ನರ್ಸಿಂಗ್ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ, ಉತ್ತಮ ಆರೋಗ್ಯ ಸೇವೆ ಒದಗಿಸಲು ಗುಣಮಟ್ಟದ ನರ್ಸ್ಗಿಳನ್ನು ತಯಾರು ಮಾಡಿ ಸಮಾಜಕ್ಕೆ ನೀಡುವ ಕಳಕಳಿಯಿಂದ ಆರಂಭಿಸಲಾದ ಈ preped.in ಆ್ಯಪ್ ಕೇವಲ ಆರೇಳು ತಿಂಗಳುಗಳಲ್ಲಿ ಸಾವಿರಾರು ನರ್ಸಿಂಗ್ ವಿದ್ಯಾರ್ಥಿಗಳ ಮನಗೆದ್ದಿದೆ, ಕಲಿಯುವ ಉತ್ಸಾಹವನ್ನೂ ಹೆಚ್ಚಿಸಿದೆ.

ವೈದ್ಯರಾಗಬೇಕು ಎಂಬ ಕನಸು ಅನೇಕ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಅದು ಸಾಧ್ಯವಾಗದಿದ್ದರೆ ಅರೆವೈದ್ಯರಾಗಿ ಅಥವಾ ನರ್ಸ್ ಗಳಾಗಿ ರೋಗಿಗಳ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣಬೇಕು ಎಂಬ ಕನಸು ಕೂಡ ಹಲವರದ್ದಾಗಿರುತ್ತದೆ.

ಕೆಲವೊಮ್ಮೆ ಸಂಬಂಧಿಕರ, ಸ್ನೇಹಿತರ ಸಲಹೆಯಿಂದ ಗ್ರಾಮೀಣ ಭಾಗದ ಅದೆಷ್ಟೋ ವಿದ್ಯಾರ್ಥಿಗಳು ನರ್ಸಿಂಗ್ ಅಥವಾ ಪ್ಯಾರಾಮೆಡಿಕಲ್ ಕೋರ್ಸ್ ಕಲಿಯಲು ಮುಂದಾಗುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿರುವ ವೈದ್ಯಕೀಯ ವಿಷಯಗಳನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿ ಪರೀಕ್ಷೆ ಎದುರಿಸಲು ಹೆಣಗಾಡುತ್ತಾರೆ. ಕೊನೆಗೆ ವಿಷಯ ತಿಳಿದರೂ ಅಥವಾ ತಿಳಿಯದಿದ್ದರೂ ಹೇಗೋ ಪರೀಕ್ಷೆ ಪಾಸುಮಾಡಿ ಸೇವೆಗೆ ನಿಲ್ಲುತ್ತಾರೆ.

ಇಂಥವರಿಂದ ಗುಣಮಟ್ಟದ ಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ. ಈ ಸಮಸ್ಯೆಗೊಂದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಯೋಚಿಸಿದಾಗ ಬಾಗಲಕೋಟೆ ನಗರದ ಖ್ಯಾತ ಕಿಡ್ನಿ ತಜ್ಞ ಡಾ.ಸಂದೀಪ ಹುಯಿಲಗೋಳ ಅವರಿಗೆ ಹೊಳೆದದ್ದು preped.in ಆ್ಯಪ್ ಆರಂಭಿಸಬೇಕೆಂಬ ಚಿಂತನೆ .

ಇವರ ಯೋಜನೆಗೆ ನೆರವಾದವರು ಬಾಗಲಕೋಟೆಯ ಸಾಫ್ಟ್ ವೇರ್ ಎಂಜಿನಿಯರ್ ಕಾರ್ತಿಕ ಮುಳಗುಂದ ಹಾಗೂ ನರ್ಸಿಂಗ್ ವಿಷಯಗಳ ಉಪನ್ಯಾಸಕರಾದ ಡಾ.ಸಂಗಮೇಶ ರಕರಡ್ಡಿ, ಶಿವಾನಂದ ಯರಗಲ್ ಮತ್ತಿತರರು.

ಕನ್ನಡದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಈ ವಿನೂತನ ಪ್ರಯೋಗದಿಂದ ಸ್ಮಾರ್ಟ್ಫೋನ್ ಹೊಂದಿರುವ ಎಲ್ಲ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಕುಳಿತಲ್ಲೇ ಕನ್ನಡ ಭಾಷೆಯಲ್ಲಿ ತರಗತಿಗಳನ್ನು ಆಲಿಸುವ ಅವಕಾಶ ದೊರೆಯುತ್ತಿದೆ.

ವೈದ್ಯರು ಮತ್ತು ಶುಶ್ರೂಷಕರ ನಡುವಿನ ಅಂತರ ಕಡಿಮೆ ಮಾಡುವುದು, ಅರೆವೈದ್ಯಕೀಯ ಕೋರ್ಸ್ ಕಲಿಯಲು ವಿಶೇಷವಾಗಿ ಗ್ರಾಮೀಣ ಭಾಗದಿಂದಲೇ ಬರುವ ವಿದ್ಯಾರ್ಥಿಗಳಿಗೆ ಸುಲಭ ಕನ್ನಡದಲ್ಲೇ ವಿಷಯಗಳನ್ನು ತಿಳಿಸುವುದು ಈ ಅಪ್ಲಿಕೇಷನ್ ನ ಮುಖ್ಯ ಉದ್ದೇಶವಾಗಿದೆ.

ಇದರಲ್ಲಿ ವೈದ್ಯರು ಹಾಗೂ ನರ್ಸಿಂಗ್ ವಿಷಯ ಪರಿಣತರು ಕನ್ನಡದಲ್ಲೇ ನರ್ಸಿಂಗ್ ಕೋರ್ಸ್ ಗಳ ವಿಷಯಗಳನ್ನು ಬೋಧಿಸುತ್ತಾರೆ. ಇದರಿಂದ ಕಲಿಕೆ ಸುಲಭವಾಗಿ ಪರೀಕ್ಷೆ ನಂತರ ಗುಣಮಟ್ಟದ ಸೇವೆ ಸಲ್ಲಿಸಬಹುದು ಎಂಬ ಭರವಸೆ ವಿದ್ಯಾರ್ಥಿಗಳಲ್ಲಿ ಮೂಡಿದೆ.

ಇದು ಯಾವುದೇ ನರ್ಸಿಂಗ್ ಕಾಲೇಜಿಗೆ ಪರ್ಯಾವಲ್ಲ, ಇಲ್ಲಿ ಯಾವ ಕಾಲೇಜುಗಳಿಗೆ ಪ್ರತಿಸ್ಪರ್ಧೆಯೂ ಇಲ್ಲ. ವಿದ್ಯಾರ್ಥಿಗಳು ರಾಜ್ಯದಲ್ಲಿ ತಮಗೆ ಇಷ್ಟವಾದ ಯಾವುದೇ ನರ್ಸಿಂಗ್ ಕಾಲೇಜ್ ನಲ್ಲಿ ಓದಬಹುದು. ಉಪನ್ಯಾಸಕರ ಕೊರತೆ, ಭಾಷೆಯ ಸಮಸ್ಯೆಯಿಂದ ವಿಷಯಗಳು ಸರಿಯಾಗಿ ಅರ್ಥವಾಗುತ್ತಿಲ್ಲ ಎಂಬ ಕೊರಗು ನೀಗಿಸಲು ಈ ಆ್ಯಪ್ ಸಹಕಾರಿಯಾಗಿದೆ.

preped.in ಮೂಲಕ ಯಾವುದೇ ವಿದ್ಯಾರ್ಥಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಉಚಿತವಾಗಿ ಕೆಲವು ತರಗತಿಗಳನ್ನು ಆಲಿಸುವ ಅವಕಾಶ (ಡೆಮೋ ಕ್ಲಾಸ್) ವನ್ನೂ ಕಲ್ಪಿಸಲಾಗಿದೆ. ಕಲಿಕೆ ಇಷ್ಟವಾದ ವಿದ್ಯಾರ್ಥಿ ಕೇವಲ 190 ರೂ. ಶುಲ್ಕ ನೀಡಿ ನೋಂದಾಯಿಸಿಕೊಂಡರೆ ಒಂದು ವರ್ಷ ಪೂರ್ತಿ ನಡೆಯುವ ಎಲ್ಲ ತರಗತಿಗಳನ್ನೂ ಆಲಿಸಬಹುದು. ಈಗಾಗಲೇ ನಡೆದಿರುವ ಕ್ಲಾಸ್ ಗಳ ರೆಕಾರ್ಡ್ ಡೆಡ ವಿಡಿಯೋಗಳೂ preped.in ಆ್ಯಪ್ ದಲ್ಲಿ ಲಭ್ಯ ಇರುವುದರಿಂದ ಯಾವುದೇ ವಿಷಯದ ಯಾವುದೆ ಅಧ್ಯಾಯವನ್ನು ಬೇಕಾದರೂ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಕಲಿಯಬಹುದು. ಕೇವಲ 50 ರೂ.ನೀಡಿ ಒಂದೇ ತಿಂಗಳು ಸಬ್ಸ್ಕ್ರೈಬ್ (subscribe) ಆಗುವ ಅವಕಾಶವನ್ನೂ preped.in ಆ್ಯಪ್ ದಲ್ಲಿ ಕಲ್ಪಿಸಲಾಗಿದೆ.

ಅರ್ಹ ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಶೇ.50ರಷ್ಟು ರಿಯಾಯಿತಿಯಲ್ಲಿ preped.in ಡೌನ್ ಲೋಡ್ ಮಾಡಿಕೊಳ್ಳುವ ಅನುಕೂಲವನ್ನೂ ಡಾ.ಸಂದೀಪ ಹಾಗೂ ತಂಡದವರು ವಿದ್ಯಾರ್ಥಿಗಳಿಗೆ ಕಲ್ಪಿಸುತ್ತಿರುವುದು ಇವರ ಸೇವಾಮನೋಭಾವ ಹಾಗೂ ಗುಣಮಟ್ಟದ ನರ್ಸ್ ಗಳು ತಯಾರಾಗಿ ರೋಗಿಗಳ ಸೇವೆಗೆ ದೊರಕಲಿ ಎಂಬುದಕ್ಕೆ ಸಾಕ್ಷಿಯಾಗಿದೆ.

ರಾಜ್ಯದ ಯಾವುದೇ ಮೂಲೆಯಲ್ಲಿರುವ ಕಾಲೇಜ್ನೆಲ್ಲಿ ನರ್ಸಿಂಗ್ ಅಥವಾ ಅರೆವೈದ್ಯಕೀಯ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳು preped ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ preped.in ಲಿಂಕ್ ಸಂಪರ್ಕ ಮಾಡಬಹುದಾಗಿದೆ.

Edited By : Nagesh Gaonkar
PublicNext

PublicNext

28/01/2022 09:26 am

Cinque Terre

194.48 K

Cinque Terre

1

ಸಂಬಂಧಿತ ಸುದ್ದಿ