ಬೆಂಗಳೂರು: ಈಗಾಗಲೇ ಕೊರೊನಾದಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿ ಜನ ತೊಂದರೆ ಅನುಭವಿಸುತ್ತಿರುವ ಬೆನ್ನಲ್ಲೆ ಇದೀಗ ಮತ್ತೆ ಒಂದೊಂದೆ ಪ್ರತಿಭಟನೆಗಳು ಕಿರಿಕಿರಿ ಮಾಡುತ್ತಿವೆ.
ನಿನ್ನೆ (ಗುರುವಾರ) ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಸ್ಸ್ ಬಂದ್ ಮಾಡಿ ಪ್ರತಿಭಟನೆ ಮಾಡಿರುವ ಬೆನ್ನಲ್ಲೆ ಇದೀಗ ವೈದ್ಯರು ಒಪಿಡಿ ಬಂದ್ ಮಾಡಿ ಪ್ರತಿಭಟಿಸುತ್ತಿದ್ದಾರೆ.
ಆಯುರ್ವೆದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ಅಲೋಪಥಿ ವೈದ್ಯರು, ಇಂದು (ಶುಕ್ರವಾರ) ಹೊರರೋಗಿ ವಿಭಾಗ (ಒಪಿಡಿ) ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಇದರಿಂದಾಗಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ವ್ಯತ್ಯಯವಾಗಲಿದೆ.
ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(ಫಾನಾ) ಸೇರಿ ವೈದ್ಯರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ, ಒಳರೋಗಿ ವಿಭಾಗಗಳಲ್ಲಿ ಕಪ್ಪು ಪಟ್ಟಿ ಧರಿಸಿ, ಸೇವೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ.
ರೋಗಿಗಳ ಹಿತದೃಷ್ಟಿಯಿಂದ ತುರ್ತಚಿಕಿತ್ಸೆಗಳು ಹಾಗೂ ದೂರವಾಣಿ ಸಮಾಲೋಚನೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ.
ಆದೇಶ ಹಿಂಪಡೆಯಲು ಆಗ್ರಹ:
ಕೇಂದ್ರ ಸರ್ಕಾರವು ಶಲ್ಯ ಮತ್ತು ಶಲಕ್ಯ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿರುವ ಆಯುರ್ವೆದ ವೈದ್ಯರಿಗೆ 39 ಸಾಮಾನ್ಯ ಹಾಗೂ ಕಿವಿ, ಮೂಗು, ಗಂಟಲು, ಕಣ್ಣು, ಶಿರ ಮತ್ತು ದಂತ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುಮತಿ ನೀಡಿ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಇದಕ್ಕೆ ಅಲೋಪಥಿ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
PublicNext
11/12/2020 07:34 am