ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ಸೋಮವಾರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದಾನೆ. ಆದರೂ ಸಹ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ.
ಹಾವೇರಿ ತಾಲೂಕು ಹೊಸರಿತ್ತಿಯಲ್ಲಿರುವ ಶ್ರೀ ರಾಘವೇಂದ್ರ ಮಠ ಜಲದಿಗ್ಬಂಧನಕ್ಕೆ ಒಳಗಾಗಿದೆ. ಮಠದ ಸುತ್ತ ವರದಾ ನದಿ ನೀರು ಆವರಿಸಿದ್ದು, ಮಠಕ್ಕೆ ಬರುವ ಭಕ್ತರಿಗೆ ಅನಾನುಕೂಲವಾಗಿದೆ. 500 ವರ್ಷಗಳ ಇತಿಹಾಸವಿರುವ ಈ ಮಠದ ಫಲಪುಷ್ಪ ತೋಟ, ಶ್ರೀ ರಾಘವೇಂದ್ರ, ಸುಶೀಲೇಂದ್ರ ಧೀರೇಂದ್ರ ತೀರ್ಥರ ವೃಂದಾವನ ಸಂಪೂರ್ಣ ಜಲಾವೃತವಾಗಿದೆ. ದೇಶದಲ್ಲಿ ಎರಡನೇ ಮಂತ್ರಾಲಯವೆಂದು ಖ್ಯಾತಿ ಪಡೆದಿರುವ ಹೊಸರಿತ್ತಿ ರಾಘವೇಂದ್ರ ಮಠಕ್ಕೆ ದೂರ ದೂರದ ಭಕ್ತರು ಆಗಮಿಸುತ್ತಾರೆ.
ಪ್ರತಿವರ್ಷ ಮಳೆಗಾಲದಲ್ಲಿ ವರದೆ ರಾಯರ ಮಠವನ್ನು ಸುತ್ತುವರಿಯುತ್ತಾಳೆ. ಇದನ್ನು ತಪ್ಪಿಸಲು ಮಠದ ಸುತ್ತ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ನಾವು ನೀಡಿದ ಮನವಿಗಳಿಗೆ ಯಾರೂ ಸ್ಪಂದಿಸಿಲ್ಲ ಎಂದು ಭಕ್ತರು ಆರೋಪಿಸಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಈ ಕೂಡಲೇ ಮಠಕ್ಕೆ ಭೇಟಿ ನೀಡಿ ತಡೆಗೋಡೆ ನಿರ್ಮಿಸುವ ಕುರಿತಂತೆ ಚರ್ಚಿಸಬೇಕು. ಇಲ್ಲದಿದ್ದರೆ ಹೊಸರಿತ್ತಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯರು ಭಕ್ತರು ಎಚ್ಚರಿಕೆ ನೀಡಿದ್ದಾರೆ.
PublicNext
22/07/2024 09:59 pm