ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಅದನ್ನು ಮಾರಾಟ ಮಾಡುವ ಸಕ್ಕರೆ ಕಾರ್ಖಾನೆಗಳೊಂದಿಗೆ ಎಫ್.ಆರ್.ಪಿ ದರದ ಅನ್ವಯ ಮಾರಾಟ ಮಾಡಲು ಮತ್ತು ಸಕ್ಕರೆ ಆಯುಕ್ತರ ಆದೇಶದಂತೆ ಪ್ರತಿ ಕಿ.ಮೀ ಅನ್ವಯ ಸಾರಿಗೆ ಮತು ಕಟಾವಿನ ವೆಚ್ಚ ಕಡಿತದೊಂದಿಗೆ ಹಣ ಪಾವತಿಸುವ ಷರತ್ತಿಗೊಳಪಟ್ಟು ದ್ವಿಪಕ್ಷೀಯ ಒಪ್ಪಂದ ಮಾಡುವುದು ಕಡ್ಡಾಯವಾಗಿದ್ದು, ರೈತ ಸಮುದಾಯ ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಡಿ.ಸಿ. ಯಶವಂತ ವಿ. ಗುರುಕರ್ ಅವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆ ಮತ್ತು ರೈತರೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಬ್ಬು ನಿಯಂತ್ರಣ ಆದೇಶ ದ್ವಿಪಕ್ಷೀಯ ಒಪ್ಪಂದ ಕಡ್ಡಾಯವಾಗಿದೆ. ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ರೈತರ ಸಹಮತದೊಂದಿಗೆ ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದೆ. ಒಪ್ಪಂದದ ನಮೂನೆಯನ್ನು ಡಿ.ಸಿ. ಕಚೇರಿಯಿಂದಲೆ ತಯಾರಿಸಿ ತಹಶೀಲ್ದಾರರ ಮೂಲಕ ರೈತರಿಗೆ ಮತ್ತು ಕಾರ್ಖಾನೆಗಳಿಗೆ ನೀಡಲಾಗುವುದು ಎಂದರು.
ಕಬ್ಬು ಬೆಳೆಗಾರರ ಅನೇಕ ಸಮಸ್ಯೆಗಳಿಗೆ ಒಮ್ಮೆಲೆ ತಿಲಾಂಜಲಿ ನೀಡಲು ಇಂದು ನಡೆಸಿದ ರೈತರು ಮತ್ತು ಸಕ್ಕರೆ ಕಾರ್ಖಾನೆ ನಡುವಿನ ಸಭೆ ಫಲಪ್ರಧವಾಗಿದ್ದು, ಕಬ್ಬು ಬೆಳೆಗಾರರ ಹಿತದಲ್ಲಿ ಜಿಲ್ಲೆಯ ಮಟ್ಟಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಕಂಪನಿಗಳಲ್ಲಿ ಲಂಚಾವತಾರಕ್ಕೆ ಬ್ರೇಕ್ ಬೀಳಲಿದ್ದು, ಅನ್ನದಾತ ರೈತನಿಗೆ ಕಿರಿಕಿರಿ ತಪ್ಪಲಿದೆ. ಒಪ್ಪಂದದಂತೆ ಕಾಲಮಿತಿಯಲ್ಲಿ ಹಣ ಸಿಗಲಿದೆ. ಪರಿಹಾರ ಕೊಟ್ಟಿಲ್ಲ, ಕಬ್ಬು ಕಟಾವಾಗಿಲ್ಲ ಎನ್ನುವ ದೂರುಗಳು ಇನ್ನು ಮುಂದೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ ಎಂದು ಯಶವಂತ ವಿ. ಗುರುಕರ್ ವಿವರಿಸಿದರು.
ರೈತರು ಬೆಳೆದ ಕಬ್ಬನ್ನು ಸಕಾಲದಲ್ಲಿ ಕಟಾವು ಮಾಡಿಕೊಂಡು ಹೋಗಲು ಆಯಾ ಸಕ್ಕರೆ ಕಾರ್ಖಾನೆಗಳಿಂದ ಪ್ರದೇಶವಾರು ಇಬ್ಬರು ಸಿಬ್ಬಂದಿಗಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕಬ್ಬು ಕಟಾವು ಮಾಡುವ ಮುನ್ನ ಗ್ರಾಮಸ್ಥರಿಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್ ತಂತ್ರಾಂಶ ಸಹ ಸಿದ್ಧಪಡಿಸಲಾಗುತ್ತಿದೆ. ಇನ್ನೂ ಕಬ್ಬು ತೂಕದ ದೂರುಗಳ ನಿವಾರಣೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ 2 Rapid ತಪಾಸಣಾ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಇದೇ ಇಲಾಖೆಯಡಿ ಕಬ್ಬು ಕಟಾವು ಮತ್ತು ಮಾರಾಟ ಕುರಿತಂತೆ ರೈತರು ದೂರು ಸಲ್ಲಿಸಲು ಸಹಾಯವಾಣಿ ಸ್ಥಾಪಿಸಲಾಗುತ್ತಿದೆ. ರೈತರು ದೂರು ಸಲ್ಲಿಸಿದ 24 ಗಂಟೆಯಲ್ಲಿ ಅಧಿಕಾರಿಗಳ ತಂಡ ಹೊಲಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿದೆ ಎಂದರು.
PublicNext
12/10/2022 08:20 pm