ಕಲಬುರಗಿ: ಅದು ಐದು ದಿನಗಳ ಹಸುಗೂಸು. ಹುಟ್ಟುತ್ತಲೇ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಬೆಂಗಳೂರಿಗೆ ಕರೆದೊಯ್ಯುವಂತೆ ಹೇಳಿದ್ದಾರೆ. ದುರಂತ ಅಂದ್ರೆ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಆಂಬುಲೆನ್ಸ್ಗಾಗಿ ಪೋಷಕರು ಪರದಾಡಿದ್ದಾರೆ.
ಹೌದು…ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾಂಪುರಹಳ್ಳಿ ಗ್ರಾಮದ ನಿವಾಸಿ ಗಂಗಮ್ಮ ಸೋಮವಾರ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹುಟ್ಟುತ್ತಲೇ ಹಸುಗೂಸಿಗೆ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಂಡಿದೆ. ತಕ್ಷಣ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಬೆಂಗಳೂರು ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಆದ್ರೆ ಜಿಮ್ಸ್ ಅಧಿಕಾರಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡದೇ ಬೇಜವಾಬ್ದಾರಿ ತೋರಿದ್ದಾರೆ.
ನಿನ್ನೆಯಿಂದ ಆಂಬುಲೆನ್ಸ್ ಗಾಗಿ ಪೋಷಕರು ಅಧಿಕಾರಿಗಳಿಗೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದ್ರು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸದೇ ಕೇವಲ 50 ಕಿ.ಮೀ.ವರೆಗೆ ಮಾತ್ರ ಆಂಬುಲೆನ್ಸ್ ನೀಡುವುದಾಗಿ ಹೇಳಿದ್ದಾರಂತೆ. ಹೀಗಾಗಿ ಖಾಸಗಿ ಆಂಬುಲೆನ್ಸ್ ಗೆ ೨೦-೨೫ ಸಾವಿರ ರೂಪಾಯಿ ಕೊಡಲಾಗದೇ ಪೋಷಕರು ಸರ್ಕಾರಿ ಆಂಬುಲೆನ್ಸ್ ಗಾಗಿ ಪರಾದಾಟ ನಡೆಸಿದ್ದಾರೆ. ಜಿಮ್ಸ್ ಸಿಬ್ಬಂದಿಯ ಬೇಜವಬ್ದಾರಿತನಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಜಿಮ್ಸ್ ಅಧಿಕಾರಿಗಳು ಕೊನೆಗೂ ಬೆಂಗಳೂರಿನವರೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ.
ಸದ್ಯ ವೈದ್ಯರೊಂದಿಗೆ ಐದು ದಿನದ ಹಸುಗೂಸನ್ನ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಇನ್ನು, ಜಿಮ್ಸ್ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನ, ಅಮಾನವೀಯತೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡ್ಸಿದ್ದಾರೆ.
PublicNext
01/10/2022 08:16 am