ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮುಖ್ಯ ಇಂಜಿನಿಯರ್, ಪ್ರಧಾನ ಇಂಜಿನಿಯರ್ ಬಡ್ತಿ, ಸ್ಥಳನಿಯುಕ್ತಿಗೆ ಸಂಬಂಧಪಟ್ಟಂತೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸರ್ಕಾರದ ವಿರುದ್ಧ ಅಧಿಕಾರಿ ವಲಯ ಅಸಮಾಧಾನಗೊಂಡಿದೆಯಲ್ಲದೇ ಖಾರವಾದ ಆಕ್ಷೇಪ ದಾಖಲಿಸಿದೆ.
1977ರಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳ ಪ್ರಕಾರ ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್ ಹುದ್ದೆಗಳ ಬಡ್ತಿ-ವರ್ಗಾವಣೆ ಇತ್ಯಾದಿ ಪ್ರಕ್ರಿಯೆಗಳನ್ನು ನೇರ ಮುಖ್ಯಮಂತ್ರಿಯವರ ಅಧೀನದಲ್ಲಿ ಬರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿಭಾಯಿಸುತ್ತಿತ್ತು.
ಆದರೆ, ನವೆಂಬರ್ 30ರಂದು ‘ಕರ್ನಾಟಕ ಸರ್ಕಾರದ ಕೆಲಸಗಳ ನಿಯಮಗಳು 1977’ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ತನ್ನ ಜವಾಬ್ದಾರಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಿಂದೆ ಸರಿದಿದೆ. ಆಯಾ ಇಲಾಖೆಯವರೇ ಇನ್ನು ಮುಂದೆ ಈ ಪ್ರಕ್ರಿಯೆ ನಡೆಸಬೇಕೆಂದು ಸ್ಪಷ್ಟಪಡಿಸಲಾಗಿದೆ.
ಅಷ್ಟೇ ಅಲ್ಲದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯವರು ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಇತರೆ ಅನ್ಯ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಇಂಜಿನಿಯರ್ಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಇಲ್ಲಿಂದಲೇ ಗೊಂದಲ ಸೃಷ್ಟಿಯಾಗಿದೆ.
ಪ್ರಧಾನ ಇಂಜಿನಿಯರ್ ಮತ್ತು ಮುಖ್ಯ ಇಂಜಿನಿಯರ್ ಹುದ್ದೆಗಳು ಜಲಸಂಪನ್ಮೂಲ ಇಲಾಖೆಯಲ್ಲಿ ಹೆಚ್ಚಿವೆ, ಗ್ರಾಮೀಣಾಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಕಡಿಮೆ ಸಂಖ್ಯೆ ಹುದ್ದೆಗಳಿವೆ. ಇದಲ್ಲದೆ, ಸ್ಮಾರ್ಟ್ ಸಿಟಿ, ಪೊಲೀಸ್ ಹೌಸಿಂಗ್ ಕಾರ್ಪೊರೇಷನ್, ಕೆಯುಐಡಿಎಫ್ಸಿ, ಬಿಬಿಎಂಪಿಗೆ ಯಾರು ನಿಯೋಜಿಸಬೇಕೆಂಬ ಸಮಸ್ಯೆ ಶುರುವಾಗಿದೆ.
ಇದೇ ರೀತಿ ಪ್ರಧಾನ ಇಂಜಿನಿಯರ್ ಹುದ್ದೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ರಾಜ್ಯ ಹೆದ್ದಾರಿ ಯೋಜನೆ ಮತ್ತು ಕೆಶಿಪ್ ಮುಖ್ಯ ಯೋಜನಾಧಿಕಾರಿ, ನಾಲ್ಕೂ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಯಾರು ಸ್ಥಳ ನಿಯುಕ್ತಿಗೊಳಿಸಬೇಕೆಂದು ಸ್ಪಷ್ಟವಾಗಿಲ್ಲ.
ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಈ ಮೂರು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪ್ರತ್ಯೇಕವಾಗಿದ್ದು, ಆ ನಿಯಮದ ಅನುಸಾರ ಬಡ್ತಿ ಹಾಗೂ ವರ್ಗಾವಣೆ ಮಾಡಬೇಕಾಗುತ್ತದೆ. ಈ ವರ್ಗಾವಣೆ ಬಡ್ತಿಯನ್ನು ಯಾರು ಮಾಡಬೇಕೆಂಬುದನ್ನೂ ಸ್ಪಷ್ಟಮಾಡಿಲ್ಲ.
ಜ್ಯೇಷ್ಠತಾ ಪಟ್ಟಿ, ಕೆಎಟಿ, ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಗಳಲ್ಲಿ ಬಾಕಿ ಇರುತವ ಎಲ್ಲಾ ಪ್ರಕರಣಗಳಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯವರೇ ಮೊದಲ ಪ್ರತಿವಾದಿಯಾಗಿದ್ದಾರೆ. ಈ ಹಂತದಲ್ಲಿ ತಮ್ಮ ಜವಾಬ್ದಾರಿಯನ್ನು ಆಯಾ ಇಲಾಖೆಗೆ ದಾಟಿಸಿರುವುದರಿಂದ ಲೋಕೋಪಯೋಗಿ ಇಲಾಖೆ ಯಾವ ನಿರ್ಣಯ ತೆಗೆದುಕೊಳ್ಳಬೇಕೆಂಬ ಬಗ್ಗೆಯೂ ಹೇಳಿಲ್ಲ.
ಈ ವರೆಗೂ ಬಡ್ತಿ ನೀಡುವ ಬಗ್ಗೆ ನಡೆಯುವ ಸಭೆಯು ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ, ಡಿಪಿಎಆರ್ ಕಾರ್ಯದರ್ಶಿ, ಮೂರು ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು ಕಾನೂನು ಇಲಾಖೆ ಕಾರ್ಯದರ್ಶಿ ಇರುತ್ತಿದ್ದರು. ಮುಂದೆ ಆಯಾ ಇಲಾಖೆಗಳೇ ಪ್ರಕ್ರಿಯೆ ನಡೆಸಬೇಕಾಗಿರುವುದರಿಂದ ಈ ಬಡ್ತಿ ಪ್ರಕ್ರಿಯೆ ಸಭೆಯಲ್ಲಿ ಯಾರಿರಬೇಕೆಂಬ ಬಗ್ಗೆ ಸರ್ಕಾರ ಏನೂ ತಿಳಿಸಿಲ್ಲ.
ಸಿಎಂ ಸೂಚನೆಯೇ ಅಚ್ಚರಿ: ಮುಖ್ಯ ಇಂಜಿನಿಯರ್ಗಳ ವರ್ಗಾವಣೆಗೆ ಸಿಎಂ ಸೂಚನೆ ನೀಡಿದ್ದು, ಕ್ರಮಕ್ಕಾಗಿ ಮುಖ್ಯಕಾರ್ಯದರ್ಶಿಗೆ ಟಿಪ್ಪಣಿ ಮಾಡಿದ್ದಾರೆ. ಮುಖ್ಯಕಾರ್ಯದರ್ಶಿಯವರು ಎರಡು ಇಲಾಖೆಗಳ ಮುಖ್ಯಸ್ಥರಿಗೆ ವರ್ಗಾವಣೆ ಸೂಚನೆ ನೀಡಿದ್ದಾರೆ. ಆದರೆ, ಈ ತೀರ್ಮಾನ ಯಾರು ಮಾಡಬೇಕೆಂಬ ಕುರಿತು ಖಚಿತತೆ ಇಲ್ಲವಾಗಿದೆ.
ಹೀಗಾದರೆ ಒಂದು ತೂಕ…: 15 ಪ್ರಧಾನ ಇಂಜಿನಿಯರ್ ಹುದ್ದೆ ಹಾಗೂ 71 ಮುಖ್ಯ ಇಂಜಿನಿಯರ್ ಹುದ್ದೆಗಳಿವೆ. ಇವರ ಬಡ್ತಿ-ವರ್ಗಾವಣೆ ಡಿಪಿಎಆರ್ನಲ್ಲಿ ನಡೆದರೆ ಒಂದು ತೂಕವಾಗಲಿದೆ. ಲೋಕೋಪಯೋಗಿ ಇಲಾಖೆಯಿಂದ ನಡೆದರೆ ಕೆಳಹಂತದ ಸಿಬ್ಬಂದಿ ಹಿರಿಯ ಅಧಿಕಾರಿಯ ಕಡತ ನಿರ್ವಹಿಸಿದಂತಾಗುತ್ತದೆ ಎಂಬ ವಾದವೂ ಅಧಿಕಾರಿಗಳದ್ದಾಗಿದೆ. ಜತೆಗೆ ಬಡ್ತಿಗೆ ಹಿನ್ನೆಡೆಯಾಗಲಿದ್ದು, ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ವ್ಯವಹಾರವೂ ಕಷ್ಟವಾಗಲಿದೆ ಎಂಬ ಅಭಿಪ್ರಾಯವಿದೆ.
ಕೃಪೆ: ವಿಜಯವಾಣಿ
PublicNext
07/02/2022 07:39 pm