ಬೆಳಗಾವಿ: ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಕಾರ್ಯಕ್ರಮ ಆರಂಭಿಸಿದರು.
ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು ಸರ್ಕಾರದ ಮಾರ್ಗಸೂಚಿಯಂತೆ ಶನಿವಾರ (ಫೆ.20) ಮೊದಲ ಗ್ರಾಮವಾಸ್ತವ್ಯ ಕಾರ್ಯಕ್ರಮ ಆರಂಭಗೊಂಡಿತು.
ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ ಜಿಲ್ಲಾಧಿಕಾರಿಗಳು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇದಾದ ಬಳಿಕ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.ವಸತಿನಿಲಯದ ಊಟದ ಕೋಣೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಉಪಾಹಾರ ಸೇವಿಸಿದರು.
ಗುಂಡೇಟಿಗೆ ಬಲಿಯಾದ ಸಿ.ಆರ್.ಪಿ.ಎಫ್. ಹುತಾತ್ಮ ಯೋಧ ಮಂಜುನಾಥ ಮುದುಕನಗೌಡರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು.
ಅಲ್ಲಿಂದ ಗ್ರಾಮ ಪ್ರದಕ್ಷಿಣೆ ಆರಂಭಿಸಿದ ಅವರು ಮೊದಲಿಗೆ ಹರಿಜನಕೇರಿಯ ಮನೆಗಳಿಗೆ ಭೇಟಿ ನೀಡಿದರು.
ಇದೇ ವೇಳೆ ಕರಿಯಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿ ಹಿರೇಮಠ ಅವರು ಭೂಮಿಪೂಜೆ ನೆರವೇರಿಸಿದರು.
PublicNext
20/02/2021 04:49 pm