ಹೊಸದಿಲ್ಲಿ: ಮುಂಬರುವ ದಿನಗಳಲ್ಲಿ ಐಟಿಯೇತರ ಕಂಪನಿಗಳಲ್ಲೂ ಉದ್ಯೋಗಿಗಳ ಕೆಲಸ ವೇಳೆ ಹಾಗೂ ದಿನಗಳಲ್ಲಿ ಅಗತ್ಯಾನುಸಾರ ಬದಲಾವಣೆಯಾಗಲಿದೆ. ಅಗತ್ಯ ಇದ್ದರೆ, ವಾರಕ್ಕೆ ಗರಿಷ್ಠ 48 ಗಂಟೆಗಳ ಮಿತಿಯಲ್ಲಿ 4 ದಿನಗಳ ಕೆಲಸದ ಪದ್ಧತಿಯನ್ನು ಅಳವಡಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದಿಸಿದೆ. ಈ ಬಗ್ಗೆ ಅಂತಿಮ ಅಧಿಸೂಚನೆ ಶೀಘ್ರ ಪ್ರಕಟವಾಗಲಿದೆ.
ಹೀಗಿದ್ದರೂ ಉಳಿದ ಮೂರು ದಿನಗಳ ರಜೆಗಳು ವೇತನ(Salary) ಸಹಿತವಾಗಿರಬೇಕು ಎಂದು ಸೂಚಿಸಿದೆ. ಈ ಪದ್ಧತಿಯಲ್ಲಿ ವಾರಕ್ಕೆ 48 ಗಂಟೆಗಳ ಗರಿಷ್ಠ ಮಿತಿ ಎಂದರೆ, ದಿನಕ್ಕೆ 12 ಗಂಟೆಗಳ ಕೆಲಸವಾಗಲಿದೆ. ಹಾಗೂ ಉದ್ಯೋಗಿಯ ಒಪ್ಪಿಗೆ ಪಡೆದು ಜಾರಿಗೊಳಿಸಬೇಕಾಗುತ್ತದೆ ಎಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ. ಕೆಲಸದ ಅವಧಿ ಹೆಚ್ಚಿಸಿದರೆ ರಜೆಯನ್ನೂ ಹೆಚ್ಚಿಸಲಾಗುವುದು. ಅದರ ಜತೆಯಲ್ಲಿ ರಾಜ್ಯ ವಿಮೆಯ ಮೂಲಕ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಅಲ್ಲದೆ, ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗಾಗಿ ಕಾರ್ಮಿಕ ಸಚಿವಾಲಯವು ಮೇ ಅಥವಾ ಜೂನ್ ವೇಳೆಗೆ ವೆಬ್ ಪೋರ್ಟಲ್ ಅನ್ನು ಸ್ಥಾಪಿಸಲಿದೆ. ವೇತನದ ಕುರಿತು ನೀತಿಗಳನ್ನು ರೂಪಿಸಲು ಅನುಕೂಲವಾಗುವಂತೆ ವಲಸಿಗರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಯ ಸರಿಯಾದ ಮಾಹಿತಿ ಬೇಕಾಗಲಿದೆ. ಇದಕ್ಕೆ ಪೋರ್ಟಲ್ ಸಹಾಯ ಮಾಡಲಿದೆ. ಪೋರ್ಟಲ್ ನಲ್ಲಿ ನೋಂದಾಯಿಸಲಾದ ಕಾರ್ಮಿಕರಿಗೆ ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತಗಳು ಮತ್ತು ವಿಕಲಾಂಗರಿಗೆ ವಾರ್ಷಿಕ ಉಚಿತ ವಿಮೆ ನೀಡಲಾಗುವುದು ಎಂದು ಅಪೂರ್ವಾ ಚಂದ್ರ ಹೇಳಿದರು.
PublicNext
09/02/2021 06:34 pm