ನವದೆಹಲಿ: 2021-22ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯದ ಅಭಿವೃದ್ಧಿಗಾಗಿ 1,10,055 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಭಾರತೀಯ ರೈಲ್ವೆಯು 2030ರ ವೇಳೆಗೆ ರಾಷ್ಟ್ರೀಯ ರೈಲು ಯೋಜನೆಯನ್ನು ಹೊಂದಲಿದೆ. ಇದು ಭವಿಷ್ಯದ ರೈಲ್ವೆ ವ್ಯವಸ್ಥೆಯ ಉದ್ದೇಶ ಒಳಗೊಂಡಿರಲಿದೆ. ರೈಲ್ವೇಸ್ 2.17 ಲಕ್ಷ ಕೋಟಿ ರೂ.ದಷ್ಟು ಮೊತ್ತದ ದಾಖಲೆಯ ಬಂಡವಾಳ ವೆಚ್ಚವನ್ನು ಹೊಂದಿದೆ ಎಂದು ತಿಳಿಸಿದರು.
ರೈಲ್ವೆಗೆ 1.15 ಲಕ್ಷ ಕೋಟಿ ರೂ. ನೀಡುತ್ತಿದ್ದು, ಅದರಲ್ಲಿ ಸಿಎಪಿಇಎಕ್ಸ್ (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್) ಮೊತ್ತ 1.07 ಲಕ್ಷ ಕೋಟಿ ರೂ. ಇರಲಿದೆ. ರೈಲ್ವೆಯು ಮುಂದೆ ಸರಕು ಸಾಗಣೆ ಕಾರಿಡಾರ್‌ಗೆ ಹೆಚ್ಚಿನ ಗಮನ ನೀಡಲಿದೆ. ಸರಕು ಕಾರಿಡಾರ್ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, 18,000 ಕೋಟಿ ರೂ. ಮೊತ್ತದ ಸಾರ್ವಜನಿಕ ಸಾರಿಗೆಯ ಪಾಲನ್ನು ಪಡೆದುಕೊಳ್ಳುವತ್ತ ಕೆಲಸ ಮಾಡಲಿದ್ದೇವೆ. 2023ರ ಡಿಸೆಂಬರ್ ವೇಳೆಗೆ 100 ಬ್ರಾಡ್‌ಗೇಜ್ ರೈಲ್ವೇ ಹಳಿಗಳ ವಿದ್ಯುದೀಕರಣ ನಡೆಯಲಿದೆ ಎಂದು ಬಜೆಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೆಟ್ರೋಗೆ 48,798 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದರೊಂದಿಗೆ ದೇಶದಾದ್ಯಂತ 702 ಕಿ.ಮೀ. ಮೆಟ್ರೋ ರೈಲು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೂ 1,016 ಕಿಮೀ ದೂರದ ಮಾರ್ಗಗಳ ಕಾಮಗಾರಿಗಳು ನಡೆಯುತ್ತಿವೆ. ಟೈರ್ 2 ನಗರಗಳು ಮತ್ತು ಟೈರ್ 1 ನಗರಗಳ ಸುತ್ತಮುತ್ತಲು ಮೆಟ್ರೋಲೈಟ್ ಮತ್ತು ಮೆಟ್ರೊನಿಯೊ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ನೀಡಿದ್ದಾರೆ.
PublicNext
01/02/2021 02:41 pm