ಬೆಂಗಳೂರು: ಇಂದಿನಿಂದ ಏಳು ದಿನಗಳ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಮೊದಲ ದಿನದಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತಮ ಕಾರ್ಯ ಕೈಗೊಂಡಿದೆ ಎಂದು ಶ್ಲಾಘಿಸಿದ್ದಾರೆ.
ಕೋವಿಡ್ ವಾರಿಯರ್ಸ್ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕೋವಿಡ್ ನಿಂದ ಮೃತಪಟ್ಟವರಿಗೆ ಸರ್ಕಾರ 30ಲಕ್ಷ ಪರಿಹಾರ ಘೋಷಣೆ ಮಾಡಿದೆ. ಕೋವಿಡ್ ರೋಗಿಗಳಿಗೆ ಸರ್ಕಾರದಿಂದ 248 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಸುಮಾರು 1.36 ಲಕ್ಷ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎನ್ನುವ ಮೂಲಕ ಸರ್ಕಾರ ಕಾರ್ಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಬೇಳೆಕಾಳುಗಳು ಉತ್ಪಾದನೆಯಲ್ಲಿ ಪ್ರಥಮ ಹಾಗೂ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ದೇಶದ ಮಾಹಿತಿ ತಂತ್ರಜ್ಞಾನಕ್ಕೆ ಶೇಕಡಾ 40 ರಷ್ಟು ಕೊಡುಗೆಯನ್ನು ನಾವು ನೀಡಿದ್ದೇವೆ.
ಕೊರೊನಾ ಸಂಕಷ್ಟದಲ್ಲೂ ವಾಣಿಜ್ಯ ತೆರಿಗೆ 30.467 ಕೋಟಿ ಹಾಗೂ ಅಬಕಾರಿ ಇಲಾಖೆ 16788 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಆಹಾರ ಭದ್ರತೆಯನ್ನು ಸರ್ಕಾರ ಖಾತರಿಪಡಿಸಿದೆ. ಕರೊನಾ ಲಾಕ್ಡೌನ್ ಸಮಯದಲ್ಲಿ 90 ಲಕ್ಷ ಪ್ಯಾಕ್ ಮಾಡಿದ ಪೌಷ್ಟಿಕ ಆಹಾರ ಪೊಟ್ಟಣಗಳನ್ನು ಒದಗಿಸಿದೆ ಎಂದು ಸರ್ಕಾರವನ್ನು ರಾಜ್ಯಪಾಲರು ಕೊಂಡಾಡಿದರು.
ಅಸಂಘಟಿತ ಕಾರ್ಮಿಕರಿಗೆ 5,372 ಕೋಟಿ ಮೌಲ್ಯದ ಹಣಕಾಸು ನೆರವು ನೀಡಿದೆ. ಸುಮಾರು 63,59,000 ಫಲಾನುಭವಿಗಳಿಗೆ ನೆರವು ಸಿಕ್ಕಿದೆ. 11,770 ಚರ್ಮ ಕುಶಲ ಕರ್ಮಿಗಳಿಗೆ ತಲಾ 5000 ರೂಪಾಯಿಗಳಂತೆ ಸಹಾಯ ಧನ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ನಿಧಿಯಲ್ಲಿ 51 ಲಕ್ಷ ರೈತರಿಗೆ 2000 ರೂಪಾಯಿ ಹೆಚ್ಚುವರಿ ಮೊತ್ತದೊಂದಿಗೆ 1020 ಕೋಟಿ ರೂಪಾಯಿಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದರು.
ಗ್ರಾಮ ಜ್ಯೋತಿ ಅಡಿಯಲ್ಲಿ ವಿದ್ಯುಚ್ಛಕ್ತಿ ಸೌಲಭ್ಯವಿರದ 14,320 ಕುಟುಂಬಗಳಿಗೆ ಸೌಲಭ್ಯ ಒದಗಿಸಲಾಗಿದೆ. ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮ ಆರಂಭ ಮಾಡಿದೆ. ಈ ಯೋಜನೆ ಅಡಿಯಲ್ಲಿ 1500 ಶಾಲೆಗಳನ್ನು ದತ್ತು ಪಡೆಯಲಾಗಿದೆ. ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
ಕಲ್ಬುರ್ಗಿಯಲ್ಲಿ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣದಿಂದ ಅನುಕೂಲವಾಗಲಿದೆ. ಸ್ವಚ್ಛ ಭಾರತ ಅಭಿಯಾನದಲ್ಲಿ 3.15 ಲಕ್ಷ ಪ್ರತ್ಯೇಕ ಗೃಹ ಶೌಚಾಲಯ ನಿರ್ಮಾಣವಾಗಿದೆ. ಅಮೃತಯೋಜನೆಯಲ್ಲಿ 1680 ಕೋಟಿ ರೂ ಮೊತ್ತದ 306 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎನ್ನುತ್ತಾ ಸರ್ಕಾರ ಯೋಜನೆಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
PublicNext
28/01/2021 12:23 pm