ಬೆಂಗಳೂರು: 10ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ವಾರದ ಏಳೂ ದಿನ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಕಾರ್ಮಿಕ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷ ಈ ಅಧಿಸೂಚನೆ ಅನ್ವಯವಾಗಲಿದೆ.
ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ನೌಕರರಿಗೆ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು.
ರಜೆ ಹಾಗೂ ವಾರದ ರಜೆಯಲ್ಲಿರುವ ಉದ್ಯೋಗಿಯ ಮಾಹಿತಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶನ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾರ್ಮಿಕರ ಸಂಬಳ ಮತ್ತು ಹೆಚ್ಚುವರಿ ಅವಧಿಯ ಭತ್ಯೆಯನ್ನು 1963ರ ಸಂಬಳ ಮತ್ತು ಭತ್ಯೆ ಕಾಯ್ದೆ ಅನ್ವಯ ನೀಡಬೇಕು.
ಪ್ರತಿಯೊಬ್ಬ ಕಾರ್ಮಿಕರಿಗೆ 8 ಗಂಟೆ ಅವಧಿಗೆ ಮೀರಿ ಕೆಲಸ ಮಾಡಿಸಿಕೊಳ್ಳುವಂತಿಲ್ಲ.
ಹೆಚ್ಚುವರಿ ಅವಧಿಯೂ ಗರಿಷ್ಠ 2 ಗಂಟೆ ಮೀರುವಂತಿಲ್ಲ. ಮೂರು ತಿಂಗಳಲ್ಲಿ 50 ಗಂಟೆ ಹೆಚ್ಚುವರಿ ಅವಧಿ ಮೀರುವಂತಿಲ್ಲ ಎಂದು ಸೂಚಿಸಿದೆ.
ರಜೆ ದಿನ ಅಥವಾ ಕೆಲಸದ ಅವಧಿ ಮುಗಿದ ಮೇಲೆ ಹೆಚ್ಚುವರಿ ಅವಧಿ ಕೆಲಸ ಮಾಡಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸಾಮಾನ್ಯ ಸಂದರ್ಭದಲ್ಲಿ ರಾತ್ರಿ 8 ಗಂಟೆ ನಂತರ ಮಹಿಳಾ ಕಾರ್ಮಿಕರನ್ನು ಕೆಲಸ ಮಾಡಿಸಿಕೊಳ್ಳುವಂತಿಲ್ಲ.
ಒಂದು ವೇಳೆ ಮಹಿಳಾ ಕಾರ್ಮಿಕರು ಲಿಖಿತ ಒಪ್ಪಿಗೆ ನೀಡಿದರೆ ರಾತ್ರಿ 8 ರಿಂದ ಬೆಳಗಿನ 6 ಗಂಟೆಯ ತನಕ ಅವರ ಗೌರವಕ್ಕೆ ಧಕ್ಕೆ ಬಾರದಂತೆ, ರಕ್ಷಣೆ ನೀಡಿ, ಕೆಲಸ ಒದಗಿಸಬಹುದು.
ಎಲ್ಲ ಮಹಿಳಾ ಸಿಬ್ಬಂದಿಗೆ ಶಿಫ್ಟ್ ಆಧಾರದಲ್ಲಿಯೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ಶೌಚಾಲಯ, ವಿಶ್ರಾಂತಿ ಕೊಠಡಿ, ಸೇಫ್ಟಿ ಲಾಕರ್ ಒದಗಿಸಬೇಕು.
ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ದೂರು ಸಲ್ಲಿಸಲು ಆಂತರಿಕ ಸಮಿತಿ ರಚನೆ ಮಾಡಬೇಕು.
ಈ ನಿಯಮಗಳ ಉಲ್ಲಂಘನೆ ಮಾಡುವ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ವಿರುದ್ದ 1961 ವಾಣಿಜ್ಯ ಅಂಗಡಿಗಳು ಮತ್ತು ಮಳಿಗೆಗಳ ಕಾಯ್ದೆ ಪ್ರಕಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
PublicNext
03/01/2021 08:52 am