ಪಬ್ಲಿಕ್ ನೆಕ್ಸ್ಟ್ ವಿಶೇಷ :ಕೇಶವ ನಾಡಕರ್ಣಿ
ಯಾವುದಾದರೂ ಪ್ರಕರಣದಲ್ಲಿ ದಕ್ಷ ಹಿರಿಯ ಪೊಲೀಸ್ ಅಧಿಕಾರಿ ಡಿ. ರೂಪಾ ಧ್ವನಿ ಎತ್ತಿದ್ದಾರೆ ಎಂದರೆ ಅಲ್ಲಿ ಏನೋ ಅವ್ಯವಹಾರ ಭ್ರಷ್ಟಾಚಾರ ನಡೆದಿರಲೇ ಬೇಕು ಎಂದರ್ಥ.
ಆದರೆ ನಮ್ಮ ರಾಜ್ಯದ ಪ್ರಾಮಾಣಿಕ ಅಧಿಕಾರಿಗಳ ದುರ್ದೈವ ನೋಡಿ..."ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ'' ಬರೆ ಎಂಬಂತೆ ಭ್ರಷ್ಟರಿಗೆ ಶಿಕ್ಷೆ ನೀಡುವ ಬದಲು ಅದರ ವಿರುದ್ಧ ಧ್ವನಿ ಎತ್ತುವ ಹಾಗೂ ಹೋರಾಡುವ ಅಧಿಕಾರಿಗಳಿಗೆ ಪದೆ ಪದೆ ವರ್ಗಾವಣೆ ಶಿಕ್ಷೆ. ಇದೇ ಶಿಕ್ಷೆಗೆ ಮತ್ತೆ ಗುರಿಯಾಗಿದ್ದಾರೆ ಡಿ. ರೂಪಾ.
ಬೆಂಗಳೂರು " ಸೇಫ್ ಸಿಟಿ '' ಯೋಜನೆ 620 ಕೋಟಿ ಟೆಂಡರ್ ದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ವಿರುದ್ಧ ಧ್ವನಿ ಎತ್ತಿದ ರೂಪಾ ಅವರನ್ನು ಗೃಹ ಕಾರ್ಯದರ್ಶಿ ಹುದ್ದೆಯಿಂದ ಕೆಲಸಕ್ಕೆ ಬಾರದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಮಾಡಿ ಬಿಜೆಪಿ ಸರಕಾರ, ಹೊಸ ವರ್ಷದ ಕೊಡುಗೆ ನೀಡಿದೆ.
ಈ ಬಾರಿ ರೂಪಾ ಎದುರು ಹಾಕಿಕೊಂಡಿದ್ದು ಇನ್ನೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಸೇಫ್ ಸಿಟಿ ಯೋಜನೆ ಟೆಂಡರ್ ಆಹ್ವಾನ ಹಾಗೂ ಪರಿಶೀಲನಾ ಸಮಿತಿ ಚೇರರ್ಮನ್ ಹೇಮಂತ್ ನಿಂಬಾಳ್ಕರ ಅವರನ್ನು.
ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಪತಿಯೂ ಆಗಿರುವ ಇವರ ಹೆಸರು ಕೇಳುತ್ತಲೆ ನೆನಪಾಗುವುದು 4000 ಕೋಟಿ ರೂ ಐಎಂಎ ವಂಚನೆ ಪ್ರಕರಣ. ಇದರಲ್ಲಿ ಕಾಂಗ್ರೆಸ್ ಮುಖಂಡ ರೋಷನ್ ಸಹ ಬೇಗ್ ಸಿಕ್ಕಿ ಒದ್ದಾಡುತ್ತಿದ್ದಾರೆ.
ಇದರಲ್ಲಿ ಇವರು 32 ನೇ ಆರೋಪಿಯೂ ಹೌದು. ಈಗಾಗಲೇ ಇವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಕೂಡ ಸಲ್ಲಿಸಿದೆ. ಆದರೆ ಒಮ್ಮೆ ಮಾತ್ರ ವಿಚಾರಣೆ ನಡೆಸಿರುವ ಸಿಬಿಐ ಮೌನವಾಗಿರುವುದು ನಿಗೂಢವಾಗಿದೆ. ಐಎಂಎ ಹಗರಣದಲ್ಲಿ ನಿಂಬಾಳ್ಕರ್ ಹೆಸರು ಕೇಳಿಬಂದಾಗ ಇಲಾಖಾ ವಿಚಾರಣೆ ನಡೆಸಬಹುದಾಗಿತ್ತು. ಆದರೆ ಸರಕಾರ ಅವರ ಬಗ್ಗೆ ಏಕೆ ಅಷ್ಟು ಸಾಫ್ಟ್ ? ಎಂಬುದು ಗೊತ್ತಾಗುತ್ತಿಲ್ಲ.
ವಿವಾದ ಹುಟ್ಟಿಕೊಂಡಿದ್ದು ಹೀಗೆ : ಕೇಂದ್ರ ಸರಕಾರದ ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 7500 ಸಿಸಿ ಕೆಮರಾ ಅಳವಡಿಸುವ ಯೋಜನೆ ಇದಾಗಿದೆ. ಸೇಪ್ ಸಿಟಿ ಯೋಜನೆಗೆ ಟೆಂಡರ್ ಸಿದ್ದಪಡಿಸುವಂತೆ ಬೆಂಗಳೂರು ಸಿಟಿ ಪೊಲೀಸರು ಖಾಸಗಿ ಕಂಪನಿಯೊಂದಕ್ಕೆ ಕೇಳಿದ್ದರು. ಅದು ನವೆಂಬರ್ 11 ರಂದು ತನ್ನ ಪ್ರಸ್ತಾವನೆಯನ್ನು ವೆಬ್ ಸೈಟ್ಗೆ ಅಪ್ ಲೋಡ್ ಮಾಡಿತ್ತು. ಆದರೆ ಡಿ. ರೂಪಾ ಅವರು ನವೆಂಬರ್ 7 ರಂದು ಕಂಪನಿಯಿಂದ ಕೆಲವು ವಿವರಣೆ ಕೇಳಿದ್ದರು.
ಸಿದ್ದಪಡಿಸಿದ ಟೆಂಡರ್ ದಲ್ಲಿ ಸಾಕಷ್ಟು ಲೋಪದೋಷಗಳಿದ್ದವು. ಅಂದರೆ ಒಂದು ನಿರ್ದಿಷ್ಟ ಕಂಪನಿಗೇ ಟೆಂಡರ್ ದೊರೆಯುವ ರೀತಿಯಲ್ಲಿ ದಾಖಲೆ ಸಿದ್ದಪಡಿಸಲಾಗಿತ್ತು ಎಂಬುದು ಗೃಹ ಕಾರ್ಯದರ್ಶಿಯೂ ಆಗಿದ್ದು ರೂಪಾ ಅವರ ಆಕ್ಷೇಪ.
ಕಂಪನಿಯಿಂದ ರೂಪಾ ಅವರು ದಾಖಲೆ ಕೇಳಿದ್ದಕ್ಕೆ ಕೆಂಡಾಮಂಡಲವಾದ ನಿಂಬಾಳ್ಕರ್, ಮಹಿಳಾ ಅಧಿಕಾರಿಯೊಬ್ಬರು ( ರೂಪಾ ಹೆಸರು ಪ್ರಸ್ತಾಪಿಸದೆ) ಗೃಹ ಕಾರ್ಯದರ್ಶಿ ಸೋಗಿನಲ್ಲಿ ಟೆಂಡರ್ ಪ್ರಕಟವಾಗುವ ಪೂರ್ವದಲ್ಲಿಯೇ (ನ.7 ) ಅಕ್ರಮವಾಗಿ ಮಾಹಿತಿ ಪಡೆದಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದರು.
ಸೇಫ್ ಸಿಟಿ ಯೋಜನೆಯಲ್ಲಿ ಡಿ. ರೂಪಾ ಅವರ ಅಧಿಕಾರ ಹಾಗೂ ಪಾತ್ರವನ್ನು ಸರಿಯಾಗಿ ತಿಳಿದುಕೊಳ್ಳದೆ ನಿಂಬಾಳ್ಕರ್ ಮುಖ್ಯಕಾರ್ಯದರ್ಶಿಗಳಿಗೆ ದೂರು ನೀಡಿದ್ದೇ ವಿವಾದ ಭುಗಿಲೇಳಲು ಕಾರಣವಾಗಿದೆ.
ಆದರೆ ನಿಂಬಾಳ್ಕರ್ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ರೂಪಾ, ತಾವು ಗೃಹ ಕಾರ್ಯದರ್ಶಿ ಅಧಿಕಾರದಲ್ಲಿಯೇ ಕಂಪನಿಯಿಂದ ಮಾಹಿತಿ ಪಡೆದಿದ್ದೇನೆ. ಇಷ್ಟೇ ಅಲ್ಲ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಅಕ್ಟೋಬರ್ 27 ರಂದೆ ಪತ್ರ ಬರೆದು ತಮ್ಮನ್ನು ಸೇಫ್ ಸಿಟಿ ಸಮಿತಿ ಸಭೆಗೆ ಆಹ್ವಾನಿಸಿದ್ದಾರೆ. ಹೀಗಾಗಿ ಅದೇ ಅಧಾರದ ಮೇಲೆ ನವೆಂಬರ್ 7 ರಂದು ಕಂಪನಿಗೆ ಪತ್ರ ಬರೆದು ಮಾಹಿತಿ ಕೇಳಿದ್ದೇನೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳೇ ಟೆಂಡರ್ ಪ್ರಕ್ರಿಯೇ ಅಧ್ಯಯನ ಮಾಡುವಂತೆ ಸೂಚಿಸಿ ಫೈಲನ್ನು ತಮಗೆ ನೀಡಿದ್ದರು. ಅದರಂತೆ ಪರಿಶೀಲನೆ ನಡೆಸಿದಾಗ ಅದರಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದವು ಅದರ ಆಧಾರದ ಮೇಲೆ ಕಂಪನಿಯಿಂದ ವಿವರಣೆ ಕೇಳಲಾಗಿದೆ. ಇದರಲ್ಲಿ ನೂನ್ಯತೆಗಳನ್ನು ತಮ್ಮ ಮೇಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೂ ತಂದಿದ್ದೇನೆ ಎಂದು ರೂಪಾ ಸ್ಪಷ್ಟ ಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹೇಮಂತ್ ನಿಂಬಾಳ್ಕರ್ ತಪ್ಪು ಎಂಬುದು ಭಾಸವಾಗುವುದಿಲ್ಲವೆ? ಅವರನ್ನು ಸಸ್ಪೆಂಡ್ ಮಾಡಿ ವಿಚಾರಣೆ ನಡೆಸುವ ಬದಲು ಅವರನ್ನು ವರ್ಗಾಯಿಸಿ ತಿಪ್ಪೆ ಸಾರಿಸಿದಂತೆ ಮಾಡಿ ದಕ್ಷ ಅಧಿಕಾರಿ ರೂಪಾ ಅವರನ್ನು ಎತ್ತಂಗಡಿ ಮಾಡಿರುವುದು ಯಾವ ನ್ಯಾಯ ಮುಖ್ಯಮಂತ್ರಿ ಯಡಿಯೂರಪ್ಪನವರೆ?ಇದರಲ್ಲಿ ಸರಕಾರದ ಬಿಡಂಗಿತನ ಎತ್ತಿ ತೋರಿಸಿದಂತಾಗಿದೆ. ಏನೇ ಆಗಲಿ ಈ ಅಧಿಕಾರಗಳ ಸಂಘರ್ಷ ಸರಕಾರದ ಮೇಲೆ ಪರಿಣಾಮ ಬೀರುವುದಂತೂ ಖಚಿತ.
ಡಿ. ರೂಪಾ ಅವರಿಗೆ ವಿವಾದ ಅಥವಾ ವರ್ಗಾವಣೆ ಶಿಕ್ಷೆ ಹೊಸದೇನಲ್ಲ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ದನಿ ಎತ್ತಿದಾಗಲೂ ಎತ್ತಂಗಡಿ ಬಹುಮಾನ ದೊರಕಿತ್ತು.
ಏನೇ ಆಗಲಿ ಅಧಿಕಾರದಲ್ಲಿ ಪಕ್ಷಗಳು ಬದಲಾಗಿರಬಹುದು, ಆದರೆ ಅಧಿಕಾರದ ಮದದಲ್ಲಿರುವವರ ಕಾರ್ಯಶೈಲಿ ಮಾತ್ರ ಎಂದಿಗೂ ಬದಲಾಗುವುದಿಲ್ಲ. ಪ್ರಾಮಾಣಿಕ ಅಧಿಕಾರಿಗಳ ಮನೋಬಲ ಹೆಚ್ಚಿಸಬೇಕಾದ ಬಿಜೆಪಿ ಸರಕಾರ ಭ್ರಷ್ಟರು ಹಾಗೂ ಪ್ರಾಮಾಣಿಕರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಶಿಕ್ಷೆ ನೀಡುತ್ತಿರುವುದು ದುರ್ದೈವೈದ ಸಂಗತಿ.
PublicNext
01/01/2021 02:56 pm