ಹೆತ್ತ ತಾಯಿಗೆ ಅನ್ನ-ನೀರು ನೀಡದೇ, ಶುಶ್ರೂಷೆ ಮಾಡದೇ ಪಾಪಿ ಪುತ್ರ ಹೊರಹಾಕಿದ್ದ. ಅನಾಥವಾಗಿದ್ದ ಹಿರಿ ಜೀವಕ್ಕೆ ಹಿರಿಯ ನಾಗರೀಕರ ಕಾಯ್ದೆಯಡಿ ವಯೋವೃದ್ಧರಿಗೆ ನ್ಯಾಯ ದೊರಕಿಸುವಲ್ಲಿ ಕೊರಟಗೆರೆ ತಹಸೀಲ್ದಾರ್ ಯಶಸ್ವಿಯಾಗಿದ್ದಾರೆ.
ಹೆಂಡತಿ ಮಾತನ್ನು ಕೇಳಿ ಹೆತ್ತತಾಯಿಗೆ ಅನ್ನ-ನೀರು ನೀಡದೇ ಮನೆಯಿಂದ ಹೊರಹಾಕಿದ ಮಗನ ವಿರುದ್ಧ ಮನನೊಂದ ಹಿರಿಯ ವೃದ್ಧೆ ಸೂರಿಗಾಗಿ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡಿಸಿ ವೃದ್ಧೆಗೆ ಮನೆ ನೀಡುವಂತೆ ಮಧುಗಿರಿ ಎ.ಸಿ ಆದೇಶ ನೀಡಿದ್ದಾರೆ. ಅದರಂತೆ ಮನೆಗೆ ಹಾಕಲಾಗಿದ್ದ ಬೀಗ ಹೊಡೆದು ವೃದ್ಧೆಗೆ ಸೂರು ಕಲ್ಪಿಸುವಲ್ಲಿ ಕೊರಟಗೆರೆಯ ಜನಸ್ನೇಹಿ ತಹಶೀಲ್ದಾರ್ ನಾಹೀದಾ ಜಂ ಜಂ ಹಾಗೂ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬುಡ್ಡಯ್ಯನಪಾಳ್ಯ ಗ್ರಾಮದ ಹಿರಿಯ ವೃದ್ಧೆಗೆ ನ್ಯಾಯ ಕಲ್ಪಿಸಿರುವ ವಿಶೇಷ ಪ್ರಕರಣವೊಂದು ಬುಧವಾರ ಬೆಳಕಿಗೆ ಬಂದಿದೆ. ಮಾನಸಿಕ ಮತ್ತು ದೈಹಿಕವಾಗಿ ಮನನೊಂದು ಮನೆಯ ಬೀದಿಯಲ್ಲಿ ವಾಸಿಸುತ್ತಿದ್ದ ಹಿರಿಯ ವೃದ್ಧೆ ರಂಗಹನುಮಕ್ಕಳಿಗೆ ಕೊರಟಗೆರೆ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಪುನಃ ಆಶ್ರಯ ಒದಗಿಸಿದೆ.
ಬುಡ್ಡಯ್ಯನಪಾಳ್ಯದ ವೃದ್ಧೆ ರಂಗಹನುಮಕ್ಕನಿಗೆ ತಾನಿದ್ದ ಮನೆ ತವರು ಮನೆಯಿಂದ ಬಂದಂತಹ ಉಡುಗೊರೆಯಾಗಿತ್ತು. ಈಗಾಗಲೇ ವೃದ್ಧೆ ರಂಗಹನುಮಕ್ಕ ತನ್ನ ಮಗ ರಮೇಶನಿಗೆ ಮನೆ ಮತ್ತು ಜಮೀನು ನೀಡಿದ್ದಾರೆ. ಈಗಿರುವ ತನ್ನ ಮನೆಯಲ್ಲಿನ ಒಂದು ಸಣ್ಣ ಕೋಣೆಯೊಳಗೆ ವಾಸಿಸಲು ಅವಕಾಶ ನೀಡದಿರುವ ಪರಿಣಾಮ ವೃದ್ಧೆ ಮನೆಯ ಹೊರಗೆ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರ ಸಹಾಯದಿಂದ ವೃದ್ಧೆ ತಹಶೀಲ್ದಾರ್ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಹಿರಿಯ ನಾಗರಿಕರ ಕಾಯ್ದೆಯ ಅನ್ವಯ ತೀರ್ಪು ಸಹ ವೃದ್ಧೆಯ ಪರವಾಗಿಯೇ ಬಂದಿದೆ. ಶೀಘ್ರ ಕಾರ್ಯಾಚರಣೆ ಮಾಡಿದ ತಹಶೀಲ್ದಾರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್ ತುಮಕೂರು
PublicNext
28/07/2022 12:41 pm