ಹಿಜಾಬ್ ವಿವಾದದ ಬೆನ್ನಲ್ಲೇ ಇದೀಗ ಸಾರಿಗೆ ಇಲಾಖೆಯಲ್ಲಿ ಅದೇ ರೀತಿಯ ಮತ್ತೊಂದು ವಿವಾದ ಶುರುವಾಗಿದೆ. ಬಿಎಂಟಿಸಿ ನೌಕರರ ನಡುವೆ ಟೋಪಿ ಹಾಗೂ ಕೇಸರಿ ಶಾಲಿನ ಫೈಟ್ ನಡೆಯುತ್ತಿದೆ. ಹೌದು ಮುಸ್ಲಿಂ ನೌಕರರು ಟೋಪಿ ಧರಿಸೋದರ ವಿರುದ್ಧ ಕೇಸರಿ ಶಾಲು ಅಭಿಯಾನ ಆರಂಭವಾಗಿದೆ.
ಯೆಸ್.. ರಾಜ್ಯದಲ್ಲಿ ಭುಗಿಲೆದ್ದಿದ್ದ ಕೇಸರಿ ವರ್ಸಸ್ ಹಿಜಾಬ್ ವಿವಾದ ಒಂದು ಹಂತಕ್ಕೆ ತಣ್ಣಗಾಗಿದೆ. ಆದ್ರೆ ಈ ವಿವಾದ ಈಗ ಬೇರೆ ರೂಪದಲ್ಲಿ ಬಿಎಂಟಿಸಿಗೆ ಕಾಲಿಟ್ಟಿದೆ. ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸೋ ಕೆಲ ಮುಸ್ಲಿಂ ಸಿಬ್ಬಂದಿ ಟೋಪಿ ಧರಿಸಿ ಬರ್ತಾರೆ. ಇದು ನಿಗಮದ ಯೂನಿಫಾರಂ ನಿಯಮ ಉಲ್ಲಂಘನೆ. ಹೀಗಾಗಿ ನಾವೂ ಸಹ ಕೇಸರಿ ಶಾಲು ಧರಿಸಿ ಬರ್ತಿವಿ ಎಂದು ಕೆಲ ಸಿಬ್ಬಂದಿ ಹೊಸ ತಗಾದೆ ತೆಗೆದಿದ್ದಾರೆ. ಅಲ್ಲದೇ ಬನಶಂಕರಿ ಸೇರಿದಂತೆ ಕೆಲ ಡಿಪೋಗಳಲ್ಲಿ ಕೇಸರಿ ಸಂಘ ಕಟ್ಟಿಕೊಂಡು ಶಾಲು ಧರಿಸಿಯೇ ಕೆಲಸಕ್ಕೆ ಹಾಜರಾಗ್ತಿದ್ದಾರೆ. ಇದು ನಿಗಮಕ್ಕೆ ಹೊಸ ತಲೆನೋವು ತಂದಿಟ್ಟಿದೆ..
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ನೌಕರರ ಸಂಘಟನೆಗಳು, ಇದು ಕೊರೋನಾಗಿಂತ ಕೆಟ್ಟದಾದ ವೈರಸ್. ಎಂಥಾ ಸಂದಿಗ್ಧ ಪರಿಸ್ಥಿತಿಯಲ್ಲೂ ಸಾರಿಗೆ ನಿಗಮಗಳಲ್ಲಿ ಧರ್ಮ ಎಂಟ್ರಿಯಾಗಿರಲಿಲ್ಲ. ಸದ್ಯ ಕೇಸರಿ ವರ್ಸಸ್ ಟೋಪಿ ವಿದಾದ ಇಲ್ಲಿಗೆ ನಿಲ್ಲಬೇಕು. ನೌಕರರು ಇಂಥಾ ಕೃತ್ಯಕ್ಕೆ ಮಾರು ಹೋಗ್ಬಾರ್ದು. ಸರ್ಕಾರ ಸಂಘಟನೆಗಳ ಈ ಕಿಡಿಗೇಡಿ ಕೃತ್ಯಕ್ಕೆ ಬ್ರೇಕ್ ಹಾಕ್ಬೇಕೆಂದು ಸಾರಿಗೆ ಯೂನಿಯನ್ ಗಳು ಒತ್ತಾಯಿಸಿವೆ.
ಇನ್ನು ಈ ಬೆಳವಣಿಗೆಯಿಂದ ಬಿಎಂಟಿಸಿ ನಿಗಮವೂ ಕಂಗಾಲಾಗಿದೆ. ಇಷ್ಟು ದಿನ ಯಾವುದೇ ಧರ್ಮ ಜಾತಿ ಇಲ್ಲದೇ ನೌಕರರು ದುಡಿಮೆಯೇ ಧರ್ಮ ಎಂದು ಕೆಲಸ ಮಾಡ್ತಿದ್ರು. ಈಗ ಈ ರೀತಿ ಧಾರ್ಮಿಕ ವಿಚಾರ ನಿಗಮದೊಳಗೆ ಪ್ರವೇಶಿಸಿರೋದು ಬಿಎಂಟಿಸಿಯ ಟೆನ್ಷನ್ ಹೆಚ್ಚು ಮಾಡಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳೋತ್ತೋ ಅಂತ ಕಾದು ನೋಡಬೇಕಿದೆ.
ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
13/06/2022 07:00 pm