ಚಂಡೀಗಡ, ಜೈಪುರ, ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆ ಇನ್ನು ಶಾಂತವಾಗಿಲ್ಲ.
ರಾಜಸ್ಥಾನದ ಶಹಜಹಾನ್ ಪುರ ಗಡಿಯಲ್ಲಿ ಟ್ರ್ಯಾಕ್ಟರ್ rally ನಡೆಸಿ, ಬ್ಯಾರಿಕೇಡ್ ಗಳನ್ನು ಮುರಿದ ಪ್ರತಿಭಟನಾಕಾರರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ ಘಟನೆ ಗುರುವಾರ ನಡೆದಿದೆ.
ರೈತರು ಟ್ರ್ಯಾಕ್ಟರ್ ಗಳಲ್ಲಿ ದೆಹಲಿಯತ್ತ rally ಹಮ್ಮಿಕೊಂಡಿದ್ದರು.
ರೈತರ ಒಂದು ತಂಡವು ಶಹಜಹಾನ್ಪುರ– ರೆವಾರಿ ಗಡಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆಯನ್ನು ಬಂದ್ ಮಾಡಿದೆ.
ರಾಜಸ್ಥಾನದ ಮೂಲಕ ಬಂದ ಮತ್ತೊಂದು ಗುಂಪು, ಹರಿಯಾಣ ಪ್ರವೇಶಿಸಲು ಟ್ರ್ಯಾಕ್ಟರ್ ಗಳ ಮೂಲಕ ಯತ್ನಿಸಿತು.
ಆದರೆ, ಇವರು ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದು ಸ್ಥಳದಲ್ಲಿರುವ ರೈತರು ಸ್ಪಷ್ಟಪಡಿಸಿದ್ದಾರೆ.
‘ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿದೆ. ಕೆಲವು ರೈತರು ಒತ್ತಾಯಪೂರ್ವಕವಾಗಿ ಹರಿಯಾಣದೊಳಕ್ಕೆ ನುಗ್ಗುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕಿಸಾನ್ ಮಹಾಪಂಚಾಯತ್ ಅಧ್ಯಕ್ಷ ರಾಮಪಾಲ್ ಜಾಟ್ ಹೇಳಿದ್ದಾರೆ.
‘ಬಹುತೇಕ ಯುವಕರೇ ಇದ್ದ ರೈತರ ಗುಂಪು, ಬ್ಯಾರಿಕೇಡ್ ಗಳನ್ನು ತಳ್ಳಿ, ದೆಹಲಿಯತ್ತ ತೆರಳಲು ಯತ್ನಿಸಿತು. ಅವರನ್ನು ನಿಯಂತ್ರಿಸಲು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ನಡೆಸಬೇಕಾಯಿತು’ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ಅದೇನೆ ಇರಲಿ ಸರ್ಕಾರ ಶೀಘ್ರ ಅನ್ನದಾತರ ಕಳವಳ ಆಲಿಸಿ ಸೂಕ್ತ ಪರಿಹಾರ ನೀಡಬೇಕಿದೆ.
PublicNext
01/01/2021 07:45 am