ಬೆಂಗಳೂರು : ತಮಿಳ್ನಾಡಿನ ನೀಲಗಿರಿ ಅರಣ್ಯದಲ್ಲಿ ಬುಧವಾರ ವಾಯುಪಡೆಯ ಹೆಲಿಕಾಪ್ಟರ್ ದುರ್ಘಟನೆ ಸಂಭವಿಸಿದರೂ ಕರ್ನಾಟಕ ಸರಕಾರ ಪಾಠ ಕಲೆತಂತಿಲ್ಲ.
ಅಂದರೆ ರಾಜ್ಯದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಇತರೆ ಗಣ್ಯರು ಹೆಲಿಕಾಪ್ಟರ್ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ವೈಮಾನಿಕ ತಜ್ಞರನ್ನೊಳಗೊಂಡ ಪ್ರತ್ಯೇಕ ವಿಭಾಗ ಪ್ರಾರಂಭಸಿಬೇಕೆಂಬ ಡಿಜಿಸಿಎ ( ನಾಗರಿಕ ವಿಮಾನಯಾನ ನಿರ್ದೇಶನಾಲಯ ) ಸಲಹೆಯನ್ನು ರಾಜ್ಯ ಸರಕಾರ ಈವರಗೂ ಪಾಲಿಸಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನ ಸೇನಾ ಸಿಬ್ಬಂದಿ ಸಾವಿಗಿಡಾಗಿದ್ದನ್ನು ಸ್ಮರಿಸಬಹುದಾಗಿದೆ. ವಾಯುಪಡೆಯ ಹೆಲಿಕಾಪ್ಟರ್ ದುರಂತದ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತೀವ್ರ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಆದರೆ ಅವರ ಸಚಿವಾಲಯ ಮಾತ್ರ ಡಿಜಿಸಿಎ ನೀಡಿದ್ದ ಸಲಹೆಗಳನ್ನು ಪರಿಶೀಲಿಸುವ ಗೋಜಿಗೂ ಹೋಗಿಲ್ಲ ಎಂದು ಹೇಳಲಾಗುತ್ತಿದೆ. ಬದಲಿಗೆ ಅವರ ವಿಶೇಷ ಕರ್ತವ್ಯಾಧಿಕಾರಿಗಳು ಯಾವುದೇ ಭದ್ರತಾ ಕ್ರಮಗಳಿಲ್ಲದ ಖಾಸಗಿ ಏಜನ್ಸಿಯಿಂದ ನೇರವಾಗಿ ಹೆಲಿಕಾಪ್ಟರ್ ಸೇವೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಹೆಲಿಕಾಪ್ಟರ್ ಬಗ್ಗೆ ತಾಂತ್ರಿಕವಾಗಿ ಪರಿಣಿತರಿಲ್ಲದ ಕಾರಣ ಟೆಂಡರ್ ಸೇರಿದಂತೆ ಇನ್ನಿತರ ಕಾರ್ಯ ನಿರ್ವಹಿಸಲು ಆಗುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದ ಲೋಕೋಪಯೋಗಿ ಇಲಾಖೆಯೇ ಈಗ ಖಾಸಗಿಯವರಿಂದ ಹೆಲಿಕಾಪ್ಟರ್ ಸೇವೆ ಪಡೆಯುವ ಸಂಬಂಧ ಟೆಂಡರ್ ಕರೆಯಲು ಎಂದು ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಹೆಲಿಕಾಪ್ಟರ್ ಸೇವೆ ಒದಗಿಸುವ ಸಂಬಂಧದ ಟೆಂಡರ್ ಕರೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಪರಿಷತ್ ಚುನಾವಣೆ ನೀತಿ ಸಂಹಿತೆಯಿಂದಾಗಿ ಪ್ರಕ್ರಿಯೆ ವಿಳಂಬವಾಗಿದೆ ಎನ್ನಬಹುದು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಟೆಂಡರ್ ಕರೆಯಲು ಅನುಮತಿ ನೀಡಿದೆಯಾದರೂ ಯಾವಾಗ ಕರೆಯಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆದರೆ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ, ರಾಜ್ಯಪಾಲರು ಗಣ್ಯಾತಿಗಣ್ಯರ ಪ್ರಯಾಣಕ್ಕಾಗಿ ಖಾಸಗಿ ಸಂಸ್ಥೆಯೊಂದರಿಂದ ಹೆಲಿಕಾಪ್ಟರ್ ಸೇವೆ ಪಡೆಯಲು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಂಜೂರಾತಿ ದೊರೆತಿದೆ. ಆದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧಿಕೃತ ಏಜನ್ಸಿಯೊಂದ ರಾಜ್ಯದಲ್ಲಿ ರಾಜ್ಯದಲ್ಲಿ ಹೆಲಿಕಾಪ್ಟರ್ ಸೇವೆ ನೀಡಲಿದೆ ಎನ್ನಲಾಗುತ್ತಿದೆ.
ಆಘಾತದ ಸಂಗತಿ ಎಂದರೆ ಅನುಭವ ಇಲ್ಲದ ಪೈಲಟ್ ಗಳು ಹೆಲಿಕಾಪ್ಟರ್ ಚಲಾಯಿಸಿರುವ ಬಗ್ಗೆ ರಾಜ್ಯ ಗುಪ್ತದಳದ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆಯೇ ಪಿಡಬ್ಲ್ಯೂಡಿಯ ಪ್ರಿನ್ಸಿಪಲ್ ಸೆಕ್ರೆಟ್ರಿಗೆ ಪತ್ರ ಬರೆದು ಎಚ್ಚರಿಸಿದ್ದರಲ್ಲದೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾರ್ಗಸೂಚಿಗಳನ್ನು ಪಾಲಿಸ ಬೇಕೆಂದೂ ಸಲಹೆ ನೀಡಿದ್ದರೆನ್ನಲಾಗಿದೆ. ಆದರೆ ಅಧಿಕಾರಿ ವರ್ಗ ಆ ಸೂಚನೆಗಳನ್ನು ಗಾಳಿಗೆ ತೂರಿರುವುದು ವಿಪಾರ್ಯಸ.
ನಿರ್ದೇಶನಾಲಯ ಹೆಲಿಕಾಪ್ಟರ್ ಪೈಲಟ್ ಗಳ ಅರ್ಹತೆ, ಅನುಭವ ನಿಗದಿಪಡಿಸಿದೆ. ಇಷ್ಟೇ ಅಲ್ಲ ಇಂತಿಷ್ಟು ಅವಧಿವರೆಗೆ ಹೆಲಿಕಾಪ್ಟರ್ ಹಾರಾಟ ನಡೆಸಿದ ಪೈಲಟ್ ಗಳನ್ನೇ ಸಿ.ಎಂ ರಾಜ್ಯಪಾಲರು ಹಾಗೂ ಗಣ್ಯಾತಿಗಣ್ಯರ ಪ್ರವಾಸಕ್ಕೆ ನೇಮಕ ಮಾಡಬೇಕೆಂದು ಸೂಚಿಸಿತ್ತು ಎನ್ನಲಾಗಿದೆ. ಆದರೆ ಖಾಸಗಿ ಕಂಪನಿ ಪೈಲಟ್ ಗಳ ಅನುಭವ, ಹೆಲಿಕಾಪ್ಟರ್ ಕಾರ್ಯಕ್ಷಮತೆ, ತಾಂತ್ರಿಕ ಗುಣಮಟ್ಟ, ಸುರಕ್ಷತೆ ಹಾಗೂ ಭದ್ರತೆ ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೀಗಾಗಿ ಒಂದು ವೇಳೆ ಅವಘಡ ಸಂಭವಿಸಿದರೆ ಯಾರು ಹೊಣೆ? ಎಂಬುದಕ್ಕೆ ಸಧ್ಯ ಉತ್ತರವಿಲ್ಲ.
ಮೂಲ : ಜಿ. ಮಹಂತೇಶ
PublicNext
09/12/2021 05:46 pm