ಗದಗ: ಜಿಲ್ಲಾದ್ಯಂತ ಸುರಿದ ಮಹಾ ಮಳೆ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು. ಗದಗ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೊಂಬಳ ಗ್ರಾಮದ ಸುಮಿತ್ರಾ ವಡ್ಡರ ಎಂಬ ರೈತ ಮಹಿಳೆ ಸಚಿವರ ಬಳಿ ಗಳಗಳನೆ ಅತ್ತು ನೋವು ಹಂಚಿಕೊಂಡ್ರು. ಜಮೀನಿನಲ್ಲಿ ಬೆಳೆ ಜೊತೆಗೆ ಮಣ್ಣೆಲ್ಲಾ ಕೊಚ್ಚಿಕೊಂಡು ಹೋಗೈತ್ರಿ. ಸಾಲ ಸೂಲ ಮಾಡಿ ಬಿತ್ತಿದ ಬೆಳೆ ಕಣ್ಣೆದುರೇ ನಾಶವಾಗಿದೆ. ಬದುಕು ದುಸ್ತರವಾಗಿದೆ. ದಾರಿ ಕಾಣದ ನಮಗೆ ನೀವೆ ದಾರಿ ತೋರಿಸಿ ಅಂತ ಸಚಿವರ ಬಳಿ ರೈತ ಮಹಿಳೆ ಕಣ್ಣೀರಿಟ್ಟರು.
ಇನ್ನು ಈ ವೇಳೆ ಕೃಷಿ ಅಧಿಕಾರಿಗಳು ಸಚಿವರ ಜೊತೆ ಇರದೇ ದೂರ ಉಳಿದುಕೊಂಡ ಪರಿಣಾಮ ಅಧಿಕಾರಿಗಳ ವಿರುದ್ಧ ಸಚಿವರು ಕೆಂಡಾಮಂಡಲರಾದರು. ಸಂತೆ ಹಿಂದೆ ದನ ಕಟ್ಟಿದಂತೆ ಅಧಿಕಾರಿಗಳು ಕೊನೆಯಲ್ಲಿ ಇರೋದಲ್ಲ. ಬೆಳೆಹಾನಿ ಸಮೀಕ್ಷೆ ವೇಳೆ ನನ್ನ ಜೊತೆ ಇರಲೇಬೇಕು. ನಿಮಗೆ ಬೇಡವಾದ್ರೆ ದನ ಕಾಯಲು ಹೋಗಿ. ಹೀಗೆಂದು ಕೃಷಿ ಅಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ ತರಾಟೆ ತೆಗೆದುಕೊಂಡ್ರು. ಸಚಿವರು ಸಿಟ್ಟಾಗ್ತಿದ್ದಂತೆ ಕೃಷಿ ಜಂಟಿ ನಿರ್ದೇಶಕ ಕೆ.ಜಿಯಾವುಲ್ ಹಾಗೂ ಸಿಬ್ಬಂದಿ ಓಡೋಡಿ ಬಂದ್ರು. ಎಸಿ ರೂಮ್‌ನಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡೋದಲ್ಲ. ಸೂಕ್ತ ರೀತಿ ಸಮೀಕ್ಷೆ ನಡೆಯಬೇಕು. ಸಮೀಕ್ಷೆ ಹಾಗೂ ಪರಿಹಾರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮುಂದೆ ಹಾಗಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ. ಪ್ರವಾಹ ಸಂದರ್ಭದಲ್ಲಿ ಜನರ ನೋವನ್ನು ತಾಳ್ಮೆಯಿಂದ ಕೇಳಬೇಕು. ನಿರ್ಲಕ್ಷ್ಯ ಮಾಡಿದ್ರೆ ಕ್ರಮ ಜರುಗಿಸೋದಾಗಿ ಖಡಕ್ ಎಚ್ಚರಿಕೆ ನೀಡಿದ್ರು.
ಪಕ್ಷ ಬೇಧಬಾವ ಮರೆತು ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.
PublicNext
09/09/2022 07:38 pm