ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: 'ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪೌರ ಕಾರ್ಮಿಕರ ಕೊಡುಗೆ ಅಪಾರ'

ಗದಗ: ಜನರ ಆರೋಗ್ಯ ಚೆನ್ನಾಗಿರಬೇಕು ಎಂದರೆ ಪಟ್ಟಣ ಸ್ವಚ್ಛವಾಗಿರಬೇಕು ಎಂದು ಪ್ರತಿದಿನ ಪರಿಶ್ರಮ ಪಡುವ ಪೌರ ಕಾರ್ಮಿಕರ ಸೇವೆ ಹಾಗೂ ಸಮಾಜದ ಸೌಖ್ಯ ಕಾಪಾಡುವ ಸಲುವಾಗಿ ಅವರು ನಿರ್ವಹಿಸುತ್ತಿರುವ ಕಾರ್ಯ ನಿಜಕ್ಕೂ ಶ್ರೇಷ್ಠ ಮತ್ತು ಶ್ಲಾಘನೀಯ ಎಂದು ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಚಲವಾದಿ ಹೇಳಿದರು.

ಗದಗ ಜಿಲ್ಲೆ ನರೇಗಲ್ಲ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘ ಹಾಗೂ ಪಟ್ಟಣ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಜರುಗಿದ ೧೧ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರಿಲ್ಲದಿದ್ದರೆ ಪಟ್ಟಣದ ನಾಗರಿಕರು ಆ ದಿನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಪ್ರತಿ ದಿನ ಪಟ್ಟಣವನ್ನು ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗುರುತಿಸಬೇಕು. ಸಮಾಜದ ಆರೋಗ್ಯ ಕಾಪಾಡುವಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು. ಅವರಿಗೆ ನ್ಯಾಯಯುತವಾಗಿ ಎಲ್ಲಾ ರೀತಿಯ ಸೌಲಭ್ಯ ದೊರಕುವಂತಾಗಬೇಕು.ನಾಗರಿಕತೆ ಬೆಳೆದಂತೆ ಜನರ ಅವಶ್ಯಕತೆ ಜತೆಗೆ, ಪೌರ ಕಾರ್ಮಿಕರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಹೆಚ್ಚಾಗುತ್ತಿದೆ. ಪೌರಕಾರ್ಮಿಕರಿಗೆ ಭತ್ಯ, ವೇತನ, ಅಧುನಿಕ, ವೈಜ್ಞಾನಿಕ ಸೌಲಭ್ಯ, ಸೌಕರ್ಯಗಳು ಸಮರ್ಪಕವಾಗಿ ಸಿಗಬೇಕು. ನಗರಸಭೆ ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.

ಕ.ರಾ.ಪೌ.ಸೇ.ನೌ. ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದು ಹುಣಸಿಮರದ ಮಾತನಾಡಿ, ಪೌರಕಾರ್ಮಿಕರ ಸೇವೆ ಅನನ್ಯವಾದ ಸೇವೆಯಾಗಿದ್ದು, ಇಂತಹ ಕಾರ್ಮಿಕರಿಗೆ ನಾವು ಗೌರವ ಕೊಡದೆ ಅಗೌರವದಿಂದ ನಡೆಸಿಕೊಳ್ಳುವುದು ಸರಿಯಲ್ಲ.ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಬೆಚ್ಚಗೆ ಮಲಗಿರುವಾಗ ತಾವು ಬೀದಿಯಲ್ಲಿ ನಿಂತು ನಾವು ಹಾಕಿರುವ ಕಸವನ್ನು ಸ್ವಚ್ಚಮಾಡುವ ಕೆಲಸ ಮಾಡುತ್ತಿರುತ್ತಾರೆ.ನಾವು ಕಣ್ಣುಬಿಡುವ ಮೊದಲೇ ನಗರವನ್ನು ಸ್ವಚ್ಚಗೊಳಿಸಿ ಮನಸ್ಸಿಗೆ ಮುದ ನೀಡುವ ಇವರಿಗೆ ನಾವು ಏನು ಕೊಟ್ಟರೂ ಕಡಿಮೆಯೇ ಆಗಿದೆ. ಏನು ಕೊಡದಿದ್ದರೂ ಪರವಾಗಿಲ್ಲ ಕನಿಷ್ಟ ಗೌರವವನ್ನು ಕೊಡಬೇಕು. ಕೊರೊನಾದಂತಹ ಕಠಿಣ ಸಂದರ್ಭದಲ್ಲಿ ಎಲ್ಲರೂ ಭೀತಿಗೊಳಗಾಗಿ ಜೀವವನ್ನು ಕೈಲಿಡಿದು ಬದುಕುತ್ತಿರುವಾಗ, ಸಾವಿಗೂ ಹೆದರದೆ, ಭೀತಿಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಕಾಯಕದಲ್ಲೇ ಕೈಲಾಸ ಕಂಡ ಏಕೈಕ ಸೇವಕ ವರ್ಗವೆಂದರೆ ಅದು ಪೌರಕಾರ್ಮಿಕ ವರ್ಗವಾಗಿದೆ.ಕೊರೋನಾ ಆರೈಕೆ ಕೇಂದ್ರಗಳ ತ್ಯಾಜ್ಯಗಳನ್ನು ವಿಂಗಡಣೆ ಮಾಡಲೂ ಹಿಂಜರಿಯದ ಇವರು ಕಣ್ಣಮುಂದಿರುವ ನಿಜವಾದ ದೈವಗಳಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ ಎಂದರು.

ಕ.ರಾ.ಪೌ.ಸೇ.ನೌ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಕಜ್ಜಿ, ಪ.ಪಂ ಮುಖ್ಯಾಧಿಕಾರಿ ಹನಮಂತಪ್ಪ ಮಣ್ಣೊಡ್ಡರ, ಪ.ಪಂ ಸದಸ್ಯರಾದ ದಾವುದಲಿ ಕುದರಿ, ಜ್ಯೋತಿ ಪಾಯಪ್ಪಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಪೌರ ಕಾರ್ಮಿಕರಿಗೆ ಮತ್ತು ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು. ನಂತರ ಸಂಗೀತ ಕಾರ್ಯಕ್ರಮ ಜರುಗಿದವು.

ಪ.ಪಂ ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ, ಕ.ರಾ.ಪೌ.ಸೇ.ನೌ. ಸೇವಾ‌ ಸಂಘ ನರೇಗಲ್ಲ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ, ಸ್ಥಾಯಿ ಸಮಿತಿಯ ಚೇರಮ್ ಫಕೀರಪ್ಪ ಮಳ್ಳಿ, ಕ.ರಾ.ಪೌ.ಸೇ.ನೌ. ಸೇವಾ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರ, ಕ.ರಾ.ಪೌ.ಸೇ.ನೌ. ಸೇವಾ ನರೇಗಲ್ಲ ಘಟಕದ ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಪ.ಪಂ ಸದಸ್ಯರಾದ ಕುಮಾರಸ್ವಾಮಿ ಕೋರಧ್ಯಾನಮಠ, ಮಲ್ಲಕಸಾಬ ರೋಣದ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಫಕೀರಪ್ಪ ಬಂಬ್ಲಾಪೂರ, ರಾಚಯ್ಯ ಮಾಲಗಿತ್ತಿಮಠ, ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಅಕ್ಕಮ್ಮ ಮಣ್ಣೊಡ್ಡರ, ವಿಶಾಲಾಕ್ಷಿ ಹೊಸಮನಿ, ಬಸಮ್ಮ ಧರ್ಮಾಯತ, ಶಕುಂತಲಾ ಧರ್ಮಾಯತ ಸೇರಿದಂತೆ ಪ.ಪಂ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಇದ್ದರು. ಮುತ್ತು ಹೂಗಾರ ನಿರ್ವಹಿಸಿದರು.

Edited By : PublicNext Desk
Kshetra Samachara

Kshetra Samachara

24/09/2022 09:07 am

Cinque Terre

4.8 K

Cinque Terre

0