ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಹೆಸರಾಗಿರೋ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡ ಈಗ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೆಳ್ಳಂಬೆಳಗ್ಗೆಯೇ ಕಪ್ಪತಗುಡ್ಡಕ್ಕೆ ಮುತ್ತಿಡುವ ಮೋಡಗಳ ಸಾಲು, ಮೋಡಗಳ ನಡುವೆ ಇಣುಕಿ ನೋಡುವ ಹಸಿರ ಗುಡ್ಡ. ಅಬ್ಬಾ ಎಂಥಾ ಸೌಂದರ್ಯ.
ಹೌದು, ಇದು ಗದಗ ಜಿಲ್ಲೆಯ ಕಪ್ಪತಗುಡ್ಡದ ಸೌಂದರ್ಯದ ಸೊಬಗು. ಗದಗ ಜಿಲ್ಲೆಯ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೈಚಾಚಿಕೊಂಡಿರುವ ಕಪ್ಪತಗುಡ್ಡದ ಸೌಂದರ್ಯ ಮಳೆಯಿಂದಾಗಿ ಇನ್ನಷ್ಟೂ ಹೆಚ್ಚಿದೆ.
ಸುಂದರವಾಗಿ ಮೈತಳೆದು ನಿಂತಿರೋ ಕಪ್ಪತಗುಡ್ಡ ತನ್ನೊಡಲಲ್ಲಿ ನೈಸರ್ಗಿಕವಾಗಿಯೇ ಬೆಳೆದಿರೋ ಔಷಧೀಯ ಸಸ್ಯಗಳನ್ನು ಇಟ್ಟುಕೊಂಡಿದೆ. ಅಲ್ಲದೇ ಸೀಸ, ಮ್ಯಾಂಗನೀಸ್, ಕಬ್ಬಿಣ, ಬಂಗಾರ ಹೀಗೆ ಒಂದಲ್ಲ ಎರಡಲ್ಲ 18 ಬಗೆಯ ಖನಿಜಗಳು ಕಪ್ಪತಗುಡ್ಡದ ಗರ್ಭದಲ್ಲಿದೆ. ಇಲ್ಲಿ ದೊರೆಯೋ ಬಾರಿ ಹಣ್ಣು, ನೆಲ್ಲಿಕಾಯಿ, ಊಟದ ಎಲೆ, ಬಿಕ್ಕಿ ಹಣ್ಣು, ಪೇರಲ, ಪೂಜೆಗಾಗಿ ಲೋಬಾನ, ಬೆತ್ತ, ಹಾಗೂ ಜೇನು ತುಪ್ಪ ಇತರೆ ದೈನಂದಿನ ವಸ್ತುಗಳನ್ನು ಇಲ್ಲಿನ ಜನರು ದಿನನಿತ್ಯದ ಬಳಕೆಗಾಗಿ ಉಪಯೋಗಿಸುತ್ತಿದ್ದಾರೆ.
483 ಕ್ಕೂ ಹೆಚ್ಚು ಔಷಧ ಸಸ್ಯರಾಶಿಯೂ ಇಲ್ಲಿದೆ. ಅಷ್ಟೇ ಅಲ್ಲ ಕಪ್ಪತಗುಡ್ಡದ ಮಣ್ಣೂ ಸಹ ಔಷಧೀಯ ಗುಣ ಹೊಂದಿದೆ. ಇಲ್ಲಿನ ಪ್ರತಿ ಹುಲ್ಲು ಕಡ್ಡಿಯೂ ಸಹ ತನ್ನದೇ ಮಹತ್ವದ ಔಷಧೀಯ ಗುಣ ಹೊಂದಿದೆ. ಅನಾರೋಗ್ಯ ಪೀಡಿತರಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಅದೆಷ್ಟೋ ದಿನಗಟ್ಟಲೆ ಇಲ್ಲಿ ಅಸಂಖ್ಯಾತ ಜನ ಉಳಿದು ತಮ್ಮ ಆರೋಗ್ಯವನ್ನೂ ಸರಿಪಡಿಸಿಕೊಂಡು ಹೋಗಿದ್ದಾರೆ.
PublicNext
15/09/2022 03:08 pm