ಗದಗ: ಅಕಾಲಿಕ ಮಳೆ ರೈತವರ್ಗವನ್ನು ಹೈರಾಣಾಗಿಸಿದೆ. ಬಿತ್ತಿದ ಬೀಜ ಮೊಳಕೆಯೊಡೆಯುವ ಮುನ್ನವೇ ಕೊಚ್ಚಿ ಹೋಗುತ್ತಿದೆ! ಮುಂಗಾರಿನಲ್ಲಿ ಪೆಟ್ಟು ತಿಂದ ರೈತರಿಗೆ ಬೆಳೆ ಪರಿಹಾರ ಬಂದ್ರೂ ಹಿಂಗಾರಿನಲ್ಲಿ ಶುರುವಾಗಿರುವ ಅಕಾಲಿಕ ಮಳೆ ರೈತರಲ್ಲಿ ಭೀತಿ ಹುಟ್ಟಿಸಿದೆ.
ಪ್ರಸಕ್ತ ಮುಂಗಾರಿನಲ್ಲಿ ಅತೀ ಹೆಚ್ಚು ಹಾನಿಗೆ ಒಳಗಾಗಿದ್ದು ಗದಗ ಜಿಲ್ಲೆ. 93 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಹೀಗಾಗಿ ಗದಗ ಜಿಲ್ಲೆಗೆ ಮುಂಗಾರಿನಲ್ಲಿ100 ಕೋಟಿಗೂ ಹೆಚ್ಚು ಬೆಳೆ ಪರಿಹಾರ ಬಂದಿದೆ. 46000 ಫಲಾನುಭವಿಗಳಿಗೆ 69 ಕೋಟಿ ಬೆಳೆ ಪರಿಹಾರ, 59 ಜಾನುವಾರುಗಳ ಪ್ರಾಣ ಹಾನಿಗೆ 4 ಲಕ್ಷ, 6 ಜೀವ ಹಾನಿಗೆ ತಲಾ 5 ಲಕ್ಷದಂತೆ ಪರಿಹಾರ ಬಂದಿದೆ. ಆದ್ರೆ, ಇದು ಖುಷಿ ಪಡುವ ವಿಷಯ ಅಲ್ಲ. ಯಾಕೆಂದರೆ, ಹಿಂಗಾರಿನ ಬಿತ್ತನೆಗೂ ವರುಣದೇವ ರೈತರನ್ನು ಕಾಡ್ತಿದ್ದಾನೆ.
ಗದಗ ವಾರ್ಷಿಕ ಮಳೆ 625 mm ಅಂದಾಜಿಸಲಾಗಿತ್ತು. ಆದ್ರೆ, ಈಗಾಗಲೇ 728 MM ಮಳೆ ಬಿದ್ದಿದೆ. 68% ಹೆಚ್ಚು ಮಳೆ ಬಂದಿದೆ. ಸೆಪ್ಟೆಂಬರ್ ನಲ್ಲಿ ಸುರಿದ ಭಾರಿ ಮಳೆಗೆ ಶೇ.50 ರಷ್ಟು ಬೆಳೆ ನಾಶವಾಗಿತ್ತು. ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಹಿಂಗಾರಿನ ಬೆಳೆ ಕೂಡ ನಷ್ಟವಾಗುವ ಸಂಭವ ಹೆಚ್ಚಾಗಿದೆ. ಹೀಗಾಗಿ ಬೆಳೆ ಪರಿಹಾರದ ಜತೆಗೆ ಬೆಳೆ ಸಾಲವನ್ನೂ ಮನ್ನಾ ಮಾಡಬೇಕು ಎಂದು ಜನರು ಒತ್ತಾಯಿಸ್ತಿದ್ದಾರೆ.
ಸಾಲ ಮನ್ನಾ ಮಾಡಲು ರೈತರು ಆಗ್ರಹ ಮಾಡ್ತಿರೋದು ತಪ್ಪೇನಿಲ್ಲ. ಯಾಕೆಂದರೆ, ಸರಕಾರದಿಂದ ಬೆಳೆ ನಾಶಕ್ಕೆ ಗುಲಗಂಜಿಯಷ್ಟು ಪರಿಹಾರ ಸಿಗುತ್ತಿದೆ. ಮಳೆ ಪರಿಸ್ಥಿತಿ ಅರಿತು ಸರಕಾರ ಬೆಳೆ ಸಾಲ ಮನ್ನಾ ಮಾಡುವುದು ಸೂಕ್ತ.
PublicNext
06/10/2022 08:13 pm