ಗದಗ: ಜಿಲ್ಲಾ ಕೇಂದ್ರದಿಂದ ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ಪಾಲಾ-ಬದಾಮಿ ರಾಜ್ಯ ಹೆದ್ದಾರಿ ರಸ್ತೆ ವಿಪರೀತ ಮಳೆಯಿಂದ ಸಂಪೂರ್ಣ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಡಾಂಬರ್‌ಗಿಂತ ಹೆಚ್ಚಾಗಿ ತಗ್ಗು-ಗುಂಡಿಗಳೇ ಕಾಣುತ್ತವೆ.
ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಆಯ ತಪ್ಪಿದರೂ ಶಿವನ ಪಾದ ಸೇರೋದು ಗ್ಯಾರಂಟಿ ಎನ್ನುತ್ತಾರೆ ಬೈಕ್ ಸವಾರರು. ಮಳೆ ಬಂದಾಗಲಂತೂ ಈ ರಸ್ತೆ ಸ್ಥಿತಿ ಹೇಳತೀರದು. ರಸ್ತೆಗಳಲ್ಲಿ ಮೊಣಕಾಲುದ್ದದ ತಗ್ಗು ಗುಂಡಿಗಳು ಬಿದ್ದು, ಮಳೆ ನೀರು ಗುಂಡಿಗಳಲ್ಲಿ ನಿಂತು ತಗ್ಗು ಯಾವುದು ರಸ್ತೆ ಯಾವುದು ಎಂದು ತಿಳಿಯದೇ ವಾಹನ ಸವಾರರು ಪರದಾಡುವಂತವಾಗಿದೆ.
ರಾತ್ರಿ ಸಮಯದಲ್ಲಿ ಭಾರೀ ವಾಹನಗಳ ಲೈಟ್‌ನ ಬೆಳಕಿಗೆ ರಸ್ತೆ ಕಾಣದೇ ಬೈಕ್ ಸವಾರರು ತಗ್ಗು ಗುಂಡಿಗಳಲ್ಲಿ ಬಿದ್ದು ಎಷ್ಟೋ ಜನ ಕೈ ಕಾಲು ಮುರಿದುಕೊಂಡಿದ್ದಾರೆ. ಜನಪ್ರತಿನಿಧಿಗಳು ಈ ರಸ್ತೆ ಮಾರ್ಗವಾಗಿ ಸಂಚರಿಸಲಿ ಆಗ ತಿಳಿಯುತ್ತ ಜನ ಸಾಮಾನ್ಯರ ಗೋಳು ಏನೂ ಎನ್ನುವುದು ಎಂದು. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪ್ರಜ್ಞಾವಂತರು ಈ ಭಾಗದ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸುರೇಶ ಲಮಾಣಿ, ಪಬ್ಲಿಕ್ ನೆಕ್ಸ್ಟ ಗದಗ
PublicNext
12/10/2022 06:51 pm