ಗದಗ: ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಮ್ಮದ್ ಪೈಗಂಬರ್ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಶ್ರೀರಾಮಸೇನೆ ಕಾರ್ಯಕರ್ತರು ಶಾಲಾ ಮುಖ್ಯೋಪಾಧ್ಯಾಯಿನಿಗೆ ಮುತ್ತಿಗೆ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ, ಗದಗ ತಾಲೂಕಿನ ನಾಗಾವಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
ಮಂಗಳೂರು ಮೂಲದ ಶಾಂತಿ ಪ್ರಕಾಶನದಿಂದ ಮುದ್ರಿತವಾಗಿರೋ ಮಹ್ಮದ್ ಪೈಗಂಬರ ಕುರಿತಾದ ಪುಸ್ತಕಗಳನ್ನ ಗದಗ ಗುತ್ತಿಗೆದಾರ ಜುನೆದ್ ಸಾಬ್ ಉಮುಚಗಿ ಅನ್ನೋರು,ಶಾಲೆಗೆ ನೀಡಿ,ಪೈಗಂಬರ್ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಬಹುಮಾನ ಘೋಷಣೆ ಮಾಡಿರುವ ಆರೋಪ ಕೇಳಿ ಬಂದಿದೆ.
ಪುಸ್ತಕ ಓದಿ ಪೈಗಂಬರ್ ಪ್ರಬಂಧ ಬರೆಯುವಂತೆ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಮಕ್ಕಳಿಗೆ ಸೂಚಿಸಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಶ್ರೀರಾಮ ಸೇನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಮುತ್ತಿಗೆ ಹಾಕಿ ಗಲಾಟೆ ಮಾಡಿದ ಘಟನೆ ನಡೆಯಿತು.
ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಅವರನ್ನ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಶಿವಾಜಿ,ಅಂಬೇಡ್ಕರ್, ಮಹಾತ್ಮ ಗಾಂಧೀಜಿ,ಸ್ವಾಮಿ ವಿವೇಕಾನಂದ,ಭಗತ್ ಸಿಂಗ್,ರಾಣಿ ಚನ್ನಮ್ಮ ಬಗ್ಗೆ ಯಾಕೆ ಪ್ರಬಂಧ ಬರೆಸಲಿಲ್ಲ? ಮಹಮ್ಮದ್ ಪೈಗಂಬರ್ ಬಗ್ಗೆ ಯಾಕೆ ಪ್ರಬಂಧ ಬರೆಸಿದ್ದೀರಿ ಅಂತ ಕಾರ್ಯಕರ್ತರು ಪ್ರಶ್ನಿಸಿದರು.
ಮುಖ್ಯ ಶಿಕ್ಷಕರು ಮಕ್ಕಳಲ್ಲಿ ಜಾತಿ ಧರ್ಮದ ವಿಷಬೀಜ ಬಿತ್ತುತ್ತಿದ್ದಾರೆ ಅಂತ ಕಾರ್ಯಕರ್ತರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ತಪ್ಪಾಯ್ತು ಎಂದು ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಪರಿಪರಿಯಾಗಿ ಬೇಡಿಕೊಂಡ ಪ್ರಸಂಗವೂ ಜರುಗಿತು. ಅಲ್ಲದೇ ಕಣ್ಣೀರು ಹಾಕಿದ ಘಟನೆ ಸಹ ಜರುಗಿತು. ಸ್ಥಳಕ್ಕೆ ಸಿಇಓ ಹಾಗೂ ಡಿಡಿಪಿಐ ಆಗಮಿಸುವಂತೆ ಪಟ್ಟು ಹಿಡಿದ ಕಾರ್ಯಕರ್ತರು ಅಬ್ದುಲ್ ಮುನಾಫ್ ತಕ್ಷಣ ರಾಜೀನಾಮೆ ನೀಡ್ಬೇಕು ಅಂತಲೂ ಪಟ್ಟು ಹಿಡಿದ್ರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
Kshetra Samachara
27/09/2022 05:26 pm