ಗದಗ: ಸುಂದರ ವಾತಾವರಣ, ಬೃಹತ್ ಪ್ರಾಂಗಣ, ವಿಶಾಲ ಲೈಬ್ರರಿ, ಹೈಟೆಕ್ ಟೀಚಿಂಗ್, ನೋಡ್ತಿದ್ರೆ ಇದೇನೂ ಸಾಫ್ಟ್‌ವೇರ್ ಕಂಪನಿನಾ? ಅಂತ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಇದು ಗದಗ ನಗರದಲ್ಲಿ ಸ್ಥಾಪನೆಯಾದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ. 2016ರಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ಏಷ್ಯಾದಲ್ಲಿಯೇ ಮೊಟ್ಟ ಮೊದಲ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಯಿತು.
ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಬಿಎ, ಬಿಎಸ್ಸಿ, ಬಿಕಾಂ ಪದವಿಯ 5 ಕೋರ್ಸ್, ಎಂಎ, ಎಂಕಾಂ, ಎಂಎಸ್‌ಸಿ ಸ್ನಾತಕೋತ್ತರದಲ್ಲಿ 10 ಕೋರ್ಸ್, 2 ಡಿಪ್ಲೊಮಾ ಕೋರ್ಸ್ ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.ಇಷ್ಟೆಲ್ಲ ಇದ್ರೂ ಇಲ್ಲಿನ ವಿದ್ಯಾರ್ಥಿಗಳಿಗೆ ನೌಕರಿಯಲ್ಲಿ ಮೀಸಲಾತಿಯೇ ಇಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ನೌಕರಿಯಲ್ಲಿ ಮೀಸಲಾತಿ ನೀಡಬೇಕೆಂದು ಇಲ್ಲಿನ ವಿ.ಸಿ ಮತ್ತು ರಿಜಿಸ್ಟ್ರಾರ್ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆರ್‌ಡಿಪಿಆರ್ ಎಸಿಎಸ್ ಉಮಾ ಮಹದೇವನ್ ನೇತೃತ್ವದಲ್ಲಿ ಸಭೆ ಕೂಡ ಮಾಡಲಾಗಿದೆ. ಆದ್ರೆ ಪ್ರಕ್ರಿಯೆ ವಿಳಂಬ ಆಗ್ತಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನೌಕರಿ ಮೀಸಲಾತಿ ಆದಷ್ಟು ಬೇಗ ನೀಡಬೇಕೆಂದು ವಿಸಿ ಮತ್ತು ರಿಜಿಸ್ಟ್ರಾರ್ ಮನವಿ ಮಾಡಿದ್ದಾರೆ.
ಇನ್ನೂ ಅಕಾಡೆಮಿಕ್ ದೃಷ್ಟಿಯಿಂದಲೂ ವಿದ್ಯಾರ್ಥಿಗಳಿಗೆ ಭವಿಷ್ಯ ಇಲ್ಲದಂತಾಗಿದೆ. ಪ್ರಾಧ್ಯಾಪಕರ ಖಾಯಂ ನೇಮಕಾತಿ ಇಲ್ಲವಾದ್ದರಿಂದ ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡಲು ಅವಕಾಶ ಸಿಗದಂತಾಗಿದೆ. ಬೇರೆ ವಿವಿಯಲ್ಲೂ ಆರ್‌ಡಿಪಿಆರ್ ಕೋರ್ಸ್ ಇಲ್ಲದ್ದರಿಂದ ಬೇರೆ ಯಾವ ವಿವಿಯಲ್ಲೂ ಸಂಶೋಧನೆ ಮಾಡುವಂತಿಲ್ಲ. NET, SLET ಗೆ MA in RDPR ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲವೇ ಇಲ್ಲ. ಹೀಗಾಗಿ ಅಕಾಡೆಮಿಕ್ ಭವಿಷ್ಯ ಅತಂತ್ರವಾಗಿದೆ.
ಸರಕಾರ ಇಲ್ಲಿನ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಿ, ಅವರ ಭವಿಷ್ಯದ ದೃಷ್ಟಿಯಿಂದ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೇರಿದಂತೆ ನೆಟ್, ಸ್ಲೆಟ್‌ಗೂ ಅವಕಾಶ ಕಲ್ಪಿಸಲು ಮುಂದಾಗಬೇಕಿದೆ.
PublicNext
14/09/2022 09:31 am