ಪತ್ರಕರ್ತ ಸೋಮಣ್ಣ ಮಾಚಿಮಾಡ ಅವರು ಬಿಗ್ ಬಾಸ್ ಮನೆಯಲ್ಲಿ ಮಾಜಿ ಪತ್ನಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಹೌದು. ಸೋಮಣ್ಣ ಅವರು ಬಿಗ್ ಬಾಸ್ಗೆ ಎಂಟ್ರಿ ಕೊಡುವಾಗಲೇ 'ನಾನು ಒಂಟಿ' ಎಂಬ ಮಾತನ್ನು ಹೇಳಿಕೊಂಡಿದ್ದರು. ಹೀಗೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈಗ ಅವರು ಬಿಗ್ ಬಾಸ್ನಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
'ವಿಚ್ಛೇದನದ ಸಂದರ್ಭದಲ್ಲಿ ನಾನು ಬೆಳಗ್ಗೆ ಕೋರ್ಟ್ಗೆ ಹೋಗುತ್ತಿದ್ದೆ. ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ. ನಾವಿಬ್ಬರೂ ಮ್ಯೂಚುವಲ್ ಆಗಿ ವಿಚ್ಛೇದನ ಪಡೆದೆವು. ಇವತ್ತಿಗೂ ಮರೆತು ಬದುಕಲು ಸಾಧ್ಯವಾಗುತ್ತಿಲ್ಲ. ಆಕೆಯೇ ಫಸ್ಟ್, ಆಕೆಯೇ ಲಾಸ್ಟ್' ಎಂದು ಸೋಮಣ್ಣ ಭಾವುಕರಾಗಿ ನುಡಿದರು.
'ನಾವು ಅವರ ಬಳಿ ಮರಳಿ ಬರುವಂತೆ ಕೋರಿಕೊಳ್ಳುತ್ತೇವೆ' ಎಂದು ಸಹ ಸ್ಪರ್ಧಿಗಳು ಕೋರಿದರು. ಇದಕ್ಕೆ 'ನೋ' ಎಂಬ ಉತ್ತರವನ್ನು ಸೋಮಣ್ಣ ಹೇಳಿದರು. 'ಜೀವನದಲ್ಲಿ ಅವಳನ್ನು ನಾನು ಸ್ವಲ್ಪ ನೋಯಿಸಿದೆ ಅನಿಸುತ್ತದೆ. ನನ್ನ ಕೆಲಸದಲ್ಲಿ ನಾನು ಬ್ಯುಸಿ ಆಗಿಬಿಟ್ಟೆ. ನನಗೆ ಕೆಲಸ ಇಂಪಾರ್ಟೆಂಟ್ ಎನ್ನುತ್ತಿದ್ದೆ. ನನ್ನ ತಂದೆ ಸೇನೆಯಲ್ಲಿ ಇದ್ದರು. ನಾನೂ ಸೇನೆ ಸೇರಿದ್ದರೆ ನೀನು ಮನೆಯಲ್ಲಿ ಒಬ್ಬಳೇ ಇರಬೇಕಾಗುತ್ತಿತ್ತು ಎನ್ನುತ್ತಿದೆ. ಬಿಗ್ ಬಾಸ್ಗೆ ಬರುವಾಗ ಅವಳಿಗೆ ಕರೆ ಮಾಡಿದೆ. ಆಗ ಸಮಾಧಾನ ಆಯಿತು' ಎಂದು ಸೋಮಣ್ಣ ನೋವನ್ನು ಹಂಚಿಕೊಂಡರು.
'ವಿಚ್ಛೇದನದ ನಂತರ ಗೆಳೆಯರು ದೂರ ಮಾಡಿದರು. ಕುಟುಂಬದವರು ನನ್ನ ಅವಾಯ್ಡ್ ಮಾಡಿದರು. ನನಗೆ ಕೊನೆಯಲ್ಲಿ ಉಳಿದುಕೊಂಡಿದ್ದು ಕೆಲಸ ಮಾತ್ರ. ಹೀಗಾಗಿ ಜನರ ಜತೆ ಬೆರೆಯುವ ಉದ್ದೇಶದಿಂದ ಇಲ್ಲಿಗೆ ಬಂದೆ. ನನಗೆ ಚಿಕ್ಕಂದಿನಿಂದ ಆಗಿದ್ದೂ ಹೀಗೆ. ಸಣ್ಣ ವಯಸ್ಸಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಅಪ್ಪನ ಜತೆ ಊಟ ಮಾಡಿದ್ದೂ ನೆನಪಿಲ್ಲ. ಈ ಕಾರಣಕ್ಕೆ ನಾನು ಇಲ್ಲಿ ಬಂದೆ' ಎಂದು ಕಣ್ಣೀರು ಹಾಕಿದ್ದಾರೆ.
PublicNext
08/08/2022 08:18 pm