ಮುಂಬೈ: ಟ್ರೋಲಿಗರು ಸದಾ ಎಚ್ಚರವಾಗಿರುತ್ತಾರೆ. ಯಾರ ಕಾಲೆಳೆಯುವುದು ಎಂದು ಕಾಯುತ್ತಿರುವಾಗ ಅನೇಕ ರಾಜಕೀಯ ವ್ಯಕ್ತಿಗಳು, ನಟ ನಟಿಯರು ಇವರಿಗೆ ಆಹಾರವಾಗಿ ಬಿಡುತ್ತಾರೆ. ಸದ್ಯ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಕಾರ್ಯದರ್ಶಿ, ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗಾಗಿ ಬುಧವಾರ ಭಾರತ ಕ್ರಿಕೆಟ್ ತಂಡವನ್ನು ಘೋಷಿಸಿದ್ದ ವೀಡಿಯೊ ಟ್ರೋಲಿಗರಿಗೆ ಆಹಾರವಾಗಿದೆ.
ವೀಡಿಯೊದಲ್ಲಿ ಜಯ್ ಶಾ ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ತಂಡವನ್ನು ಅಭಿನಂದಿಸುವಾಗ ಪ್ರತಿ ಆಂಗ್ಲ ಪದವನ್ನು ಬಿಡಿಸಿ, ಬಿಡಿಸಿ ಓದುತ್ತಿರುವುದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡವನ್ನು ಘೋಷಿಸುವ ಜಯ್ ಶಾ ಅವರ ವೀಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿತ್ತು. ಜಯ್ ಶಾ ಆಂಗ್ಲ ಭಾಷೆಯನ್ನು ಉಚ್ಚರಿಸುತ್ತಿರುವ ಶೈಲಿಯು ವ್ಯಾಪಕ ಟ್ರೋಲ್ ಗೆ ಕಾರಣವಾಗಿದೆ.
ಯಾವ ಯೋಗ್ಯತೆಯ ಮೇಲೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರಿಗೆ ಬಿಸಿಸಿಐ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಡಾ.ರಾಗಿಣಿ ನಾಯಕ್ ಪ್ರಶ್ನಿಸಿದ್ದಾರೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ''ಎಂತಹ ಮುಗ್ದ ಹುಡುಗ! ಆತ ಬಿಸಿಸಿಐ ಬಾಸ್. ಅವರ ಹೆಸರು ಜಯ್ ಶಾ. ನಿಸ್ಸಂಶವಾಗಿಯೂ ಬಿಜೆಪಿಯಲ್ಲಿ ಯಾವುದೇ ಕುಟುಂಬ ರಾಜಕಾರಣವಿಲ್ಲ ಅಥವಾ ಬಿಸಿಸಿಐನಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲ'' ಎಂದು ಪ್ರಶಾಂತ್ ಭೂಷಣ್ ಟ್ವೀಟಿಸಿದ್ದಾರೆ.
PublicNext
10/09/2021 07:38 am