ವರದಿ: ಸಂತೋಷ ಬಡಕಂಬಿ
ಗೋಕಾಕ: ಮೊನ್ನೆ ತಾನೇ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರು ಗೋಕಾಕ ಜಲಪಾತಕ್ಕೆ ಭೇಟಿ ನೀಡಿ ಪ್ರವಾಸಿಗರ ಸೆಲ್ಫಿ ಹುಚ್ಚಾಟಕ್ಕೆ ಬ್ರೇಕ್ ಹಾಕಿದ್ದರೂ ಸಹ ಈ ಪ್ರವಾಸಿಗರು ಮಾತ್ರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ!
ಹೌದು... ಜಲಪಾತದ ಹತ್ತಿರ ಹಾಗೂ ತೂಗುಸೇತುವೆ ಮೇಲೆ ಪ್ರವಾಸಿಗರಿಗೆ ನಿಷೇಧ ಹೇರಿದ್ದರೂ ಕಿಡಿಗೇಡಿಗಳು ಕಳ್ಳ ಮಾರ್ಗದ ಮೂಲಕ ಗೋಡೆ ಏರಿ ತೂಗುಸೇತುವೆ ಮೇಲೆ ಹುಚ್ಚಾಟ ಆಡುತಿದ್ದಾರೆ.
ನವಿಲಮಾಳ ಗೇಟ್ ನ ಗೋಡೆ ಹಾರಿ ನೂರಾರು ಯುವಕರು ತೂಗುಸೇತುವೆ ಮೇಲೆ ನಿಂತು ಸೆಲ್ಫಿಗೆ ಪೋಸ್ ನೀಡುತ್ತಿದ್ದಾರೆ.
ಇಲ್ಲಿ ಕಾವಲಿಗಿರುವ ಪೊಲೀಸರ ಎದುರೇ ಗೋಡೆ ಏರುತ್ತಿದ್ದರೆ, ಇನ್ನೊಂದು ಕಡೆ ಪಂಚೆ ಬಿದ್ದರೂ ಸಹ ಪ್ರವಾಸಿಗನೊಬ್ಬ ಗೋಡೆ ಇಳಿಯುತಿದ್ದಾನೆ. ಇವರ ಸರ್ಕಸ್ ನ್ನು ಪೊಲೀಸರು ನಿಸ್ಸಾಯಕರಾಗಿ ನೋಡಿದ್ದೇ ಬಂತು.
ಇನ್ನೊಂದು ಕಡೆ ತಮ್ಮ ಸೆಲ್ಫಿ ಹುಚ್ಚಿನಲ್ಲಿ ದೇವಸ್ಥಾನ ಎಂಬುದರ ಜ್ಞಾನವೇ ಇಲ್ಲದ ಯುವತಿಯರು ದೇವಸ್ಥಾನದ ಗೋಡೆಗೆ ಶೂ, ಚಪ್ಪಲಿ ಧರಿಸಿಕೊಂಡ ಕಾಲನ್ನು ಮೇಲೆ ಇಟ್ಟು ಫೋಟೊ ತೆಗೆದುಕೊಳ್ಳುತ್ತಿರುವುದು ವೈರಲ್ ಆಗಿದೆ. ಇದನ್ನೆಲ್ಲ ನೋಡುತ್ತಿದ್ದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ ಆದೇಶ, ಎಚ್ಚರಿಕೆಗೆ ಬೆಲೆನೇ ಇಲ್ವಾ ಎನ್ನುವಂತಾಗಿದೆ!
PublicNext
18/07/2022 01:51 pm