ಬೆಂಗಳೂರು: ಕನ್ನಡ ಚಿತ್ರರಂಗದ ಸಾಧಕರು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಿದೆ. ಈ ವಿಡಿಯೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ವಂದೇ ಮಾತರಂ. ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ' ಎಂದು ಬರೆದುಕೊಂಡಿದ್ದಾರೆ.
ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ವಂದೇ ಮಾತರಂ ಗೀತೆಯಲ್ಲಿ ಸ್ಯಾಂಡಲ್‌ವುಡ್‌ನ ನಟರು ಭಾಗಿಯಾಗಿದ್ದಾರೆ. ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದು, ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆ ಮೂಲಕ ಹಾಡನ್ನು ಶೇರ್ ಮಾಡಲಾಗಿದೆ.
ವಂದೇ ಮಾತರಂ ಹಾಡಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್, ಶಿವರಾಜ್ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಅನಂತ್ ನಾಗ್, ಜಗ್ಗೇಶ್, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್ ಶೆಟ್ಟಿ, ಗಣೇಶ್, ಧನಂಜಯ, ಅಜಯ್ ರಾವ್ ಸೇರಿದಂತೆ ಹಲವು ನಟರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಾಲುಮರದ ತಿಮ್ಮಕ್ಕ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಸಾಹಿತಿ ಎಸ್.ಎಲ್. ಬೈರಪ್ಪ ಅವರು ಕೂಡ ಇದ್ದಾರೆ.
ಇನ್ನು ಕಿಚ್ಚ ಸುದೀಪ್ ಕೂಡ ವಿಡಿಯೋ ಟ್ವೀಟ್ ಮಾಡಿದ್ದು, 'ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬ ಭಾರತೀಯನಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು.. ಈ ಮಾತೃಭೂಮಿ ನಮ್ಮ ಮನೆ. ನಾವು ಒಂದಾಗೋಣ ಮತ್ತು ಅದನ್ನು ಇನ್ನಷ್ಟು ಸುಂದರಗೊಳಿಸೋಣ. ವಂದೇ ಮಾತರಂ' ಎಂದು ಬರೆದುಕೊಂಡಿದ್ದಾರೆ.
PublicNext
15/08/2022 03:22 pm