ನವದೆಹಲಿ: ಒಂದು ಚಿಕ್ಕ ತಾಂತ್ರಿಕ ದೋಷದಿಂದ ಭವಿಷ್ಯವೇ ಹಾಳಾಗುವ ಪ್ರಸಂಗ ನಡೆಯುತ್ತಿರುವುದನ್ನು ಓದಿರುತ್ತೀರಿ. ಇಲ್ಲೊಂದು ಅಂತಹ ಘಟನೆ ನಡೆದಿದ್ದು, ಕೊನೆ ಗಳಿಗೆಯಲ್ಲಿ ಕೋರ್ಟ್ ನಲ್ಲಿ ವಿದ್ಯಾರ್ಥಿನಿಯ ಭವಿಷ್ಯ ಉಳಿದ ಅಪರೂಪದ ಪ್ರಸಂಗ ನಡೆದಿದೆ.
ಏನಿದು ಪ್ರಕರಣ?:
ಲಾರಿ ಚಾಲಕರೊಬ್ಬರ ಮಗಳು ಎಂಬಿಬಿಎಸ್ ಮಾಡಬೇಕೆಂಬ ಅದಮ್ಯ ಕನಸು ಕಂಡಿದ್ದಳು. ಈಕೆ ಕಲಿಯುವಿಕೆಯಲ್ಲಿ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು, ವಿದ್ಯಾಭ್ಯಾಸದಲ್ಲಿ ಟಾಪರ್ ಆಗಿದ್ದಳು, ಆದರೆ ಮೆಡಿಕಲ್ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿನ ತಾಂತ್ರಿಕ ದೋಷದಿಂದಾಗಿ ಆಕೆಯ ಕನಸು ನುಚ್ಚು ನೂರಾಗುವುದರಲ್ಲಿತ್ತು.!
ತಮಿಳುನಾಡಿನ ಮದುರೈ ನಿವಾಸಿ ವಿ.ಷಣ್ಮುಗಪ್ರಿಯ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಳು. ಶನಿವಾರ ತಂದೆ ಜತೆ ಸಮೀಪದ ಬ್ರೌಸಿಂಗ್ ಸೆಂಟರ್ ಗೆ ಆಗಮಿಸಿ ಹಾಲ್ ಟಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಳು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಉತ್ತೀರ್ಣಳಾಗಿದ್ದ, ಈಕೆ ಮೆಡಿಕಲ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ತೀರ್ಮಾನಿಸಿದ್ದಳು.
ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿದ ನಂತರ ತಂದೆ, ಮಗಳು ಬೆಚ್ಚಿಬಿದ್ದಿದ್ದರು. ಅದಕ್ಕೆ ಕಾರಣ ಹಾಲ್ ಟಿಕೆಟ್ ನಲ್ಲಿ ಈಕೆಯ ಬದಲು ಬೇರೊಬ್ಬರ ಫೋಟೊ ಮತ್ತು ಸಹಿ ಇತ್ತು. ಆದರೆ ಆಕೆಯ ಮನೆಯ ವಿಳಾಸ, ಹೆಸರು, ರೋಲ್ ನಂಬರ್, ತಂದೆಯ ಹೆಸರು ಈಕೆಯದ್ದೇ ಆಗಿತ್ತು!
ತಾಂತ್ರಿಕ ದೋಷದ ಯಡವಟ್ಟಿನಿಂದಾಗಿ ಕಂಗಾಲಾದ ವಿದ್ಯಾರ್ಥಿನಿ ಮತ್ತು ಪೋಷಕರು ಹಾಲ್ ಟಿಕೆಟ್ ವಿತರಿಸುವ ರಾಷ್ಟ್ರೀಯ ಪರೀಕ್ಷಾ ಕೇಂದ್ರವನ್ನು ಇ-ಮೇಲ್ ಹಾಗೂ ದೂರವಾಣಿ ಕರೆ ಮಾಡುವ ಮೂಲಕ ಪ್ರಯತ್ನಿಸಿದರೂ ಯಾವುದೇ ಫಲ ನೀಡಿರಲಿಲ್ಲವಾಗಿತ್ತು. ಎಲ್ಲಾ ಪ್ರಯತ್ನಗಳು ವಿಫಲವಾದಾಗ ತಂದೆ, ಮಗಳು ಎಲ್ಲಾ ಭರವಸೆಗಳನ್ನು ಕಳೆದುಕೊಂಡು ಹತಾಶರಾಗಿ ಕುಳಿತುಕೊಂಡಿದ್ದರು.
ಏತನ್ಮಧ್ಯೆ ಕೊನೆಯ ಪ್ರಯತ್ನ ಎಂಬಂತೆ ಶನಿವಾರ ಸಂಜೆ 5ಗಂಟೆಗೆ ವಿದ್ಯಾರ್ಥಿನಿಯ ತಂದೆ ಮದುರೈ ಮೂಲದ ವಕೀಲರೊಬ್ಬರನ್ನು ಭೇಟಿಯಾಗಿ, ಆದಷ್ಟು ಶೀಘ್ರವಾಗಿ ಮದುರೈ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲು ಸಾಧ್ಯವೇ ಎಂದು ವಿಚಾರಿಸಿದ್ದರು.
ತರಾತುರಿಯಲ್ಲೇ ಹಾಲ್ ಟಿಕೆಟ್ ನಲ್ಲಾದ ತಾಂತ್ರಿಕ ದೋಷದ ಕುರಿತ ದೂರನ್ನು ಸಂಜೆ 6ಗಂಟೆಗೆ ಮದ್ರಾಸ್ ಹೈಕೋರ್ಟ್ ಪೀಠಕ್ಕೆ ಸಲ್ಲಿಸಿದ್ದರು. 7 ಗಂಟೆಗೆ ಅರ್ಜಿಯ ಕ್ಷಿಪ್ರ ವಿಚಾರಣೆ ನಡೆಸಲು ಅನುಮತಿ ನೀಡಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದರು. ಮುಂದಿನ ಎರಡು ಗಂಟೆ ಅವಧಿಯೊಳಗೆ ಕೋರ್ಟ್ ನ ಸಿಬಂದಿಗಳು, ಅಧಿಕಾರಿಗಳು ಹಾಜರಾಗಿದ್ದರು. ರಾತ್ರಿ 9.15ರಿಂದ 10-30ರವರೆಗೆ ಜಸ್ಟೀಸ್ ಸುರೇಶ್ ಕುಮಾರ್ ಅರ್ಜಿಯ ವಿಚಾರಣೆ ನಡೆಸಿದ್ದರು.
ಹಾಲ್ ಟಿಕೆಟ್ ಕುರಿತ ಅರ್ಜಿಯ ವಿಚಾರಣೆ ನಡೆಸಿ ಆದೇಶ ನೀಡಿದ್ದ ಪ್ರತಿ ರಾತ್ರಿ 11ಗಂಟೆಗೆ ಲಭ್ಯವಾಗಿತ್ತು. ಮಗಳ ಭವಿಷ್ಯ ಏನಾಗುತ್ತೋ ಎಂದು ಉಸಿರು ಬಿಗಿ ಹಿಡಿದು ತಂದೆ ಕೋರ್ಟ್ ಹೊರಗೆ ಕಾಯುತ್ತಿದ್ದು, ಮಧ್ಯರಾತ್ರಿ ಕೋರ್ಟ್ ಆದೇಶದ ಅಂತಿಮ ಪ್ರತಿ ಸಿಕ್ಕಿತ್ತು. ಅಂತಿಮವಾಗಿ ಕೋರ್ಟ್ ಆದೇಶ, ವಕೀಲರ ಮಧ್ಯಪ್ರವೇಶದಿಂದ ವಿದ್ಯಾರ್ಥಿನಿಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅನುಮತಿ ದೊರಕಿದ್ದು, ಭಾನುವಾರ ನೀಟ್ ಪರೀಕ್ಷೆ ಬರೆಯುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕೋರ್ಟ್ ಆದೇಶದಲ್ಲಿ ಏನಿತ್ತು?
ವಿದ್ಯಾರ್ಥಿನಿಯ ಹಾಲ್ ಟಿಕೆಟ್ ನಂಬರ್, ಅಪ್ಲಿಕೇಶನ್ ನಂಬರ್ ಎಲ್ಲವೂ ಸಮರ್ಪಕವಾಗಿದೆ. ಈ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಕೋರ್ಟ್ ಆದೇಶ ಹೊರಡಿಸಿತ್ತು. ಈಕೆ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ, ಎಸ್ಸೆಸ್ಸೆಲ್ಸಿಯಲ್ಲಿ ಶೇ.92.8ರಷ್ಟು, ದ್ವಿತೀಯ ಪಿಯುಸಿಯಲ್ಲಿ ಶೇ.91.54ರಷ್ಟು ಅಂಕವನ್ನು ಪಡೆದಿದ್ದಾಳೆ. ಪ್ರಸಕ್ತ ಸಾಲಿನ ಪರೀಕ್ಷೆ ಬರೆಯುವ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಆಕೆಯ ವಿದ್ಯಾಭ್ಯಾಸದ ಭವಿಷ್ಯವನ್ನು ಮೊಟಕುಗೊಳಿಸಬೇಡಿ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ಕೃಪೆ: ಉದಯವಾಣಿ
PublicNext
14/09/2021 09:11 pm