ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆ ವಿವಾದದಿಂದ ಭುಗಿಲೆದ್ದಿದ್ದ ಭಾರೀ ಜನಾಕ್ರೋಶಕ್ಕೆ ಸರ್ಕಾರ ಕೊನೆಗೂ ಮಣಿದಿದೆ. ಪಠ್ಯ ವಿವಾದಕ್ಕೆ ಸರ್ಕಾರ ತೆರೆ ಎಳೆದಿದ್ದು ಚರ್ಕತೀರ್ಥ ಸಮಿತಿ ಮಾಡಿದ ಕೆಲವೊಂದಿಷ್ಟು ಎಡವಟ್ಟುಗಳನ್ನು ತಿದ್ದುಪಡಿ ಮಾಡಲು ಆದೇಶ ಹೊರಡಿಸಿದೆ. ವಿವಾದಿತ 8 ಅಂಶಗಳು ತಿದ್ದುಪಡಿಯಾಗಲಿದ್ದು, ಮಕ್ಕಳ ವಯೋಮಾನ ಮೀರಿದ ಪಠ್ಯ ಬೋಧನೆಯನ್ನು ಕೈಬಿಡಲು ಸುತ್ತೋಲೆ ಹೊರಡಿಸಿದೆ.
ಪಠ್ಯ ಪರಿಷ್ಕರಣೆ…ಪಠ್ಯ ಪರಿಷ್ಕರಣೆ ಕಳೆದ 2 ತಿಂಗಳಿನಿಂದ ಪ್ರತಿನಿತ್ಯ ಇದೇ ವಿವಾದ, ಜನಾಕ್ರೋಶ, ಹೋರಾಟಗಾರರ ಪ್ರತಿಭಟನೆ, ಸಾಹಿತಿಗಳ ಪಠ್ಯ ಹಿಂಪಡೆಯುವ ಅಭಿಯಾನ,ಚಿಂತಕರು ಬುದ್ದಿಜೀವಿಗಳ ಟೀಕೆ ಟಿಪ್ಪಣಿ. ರೋಹಿತ್ ಚಕ್ರತೀರ್ಥ vs ಬರಗೂರು ರಾಮಚಂದ್ರಪ್ಪ, ರಾಜಕೀಯ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪ ಒಂದಾ…ಎರಡಾ ಹೇಳುತ್ತಾ ಹೋದ್ರೆ ಅದೊಂದು ಪುಸ್ತಕವೇ ಆಗುತ್ತೆ ಬಿಡಿ. ಈ ಎಲ್ಲಾ ವಾದ-ವಿವಾದಗಳಿಗೆ ಸರ್ಕಾರ ಕೊನೆಗೂ ಅಂತ್ಯ ಹಾಡಿದೆ. ಭಾರೀ ಜನಾಕ್ರೋಶಕ್ಕೆ ಮಣಿದು 1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯ ಹಾಗೂ 6 ರಿಂದ 10ನೇ ತರಗತಿ ಸಮಾಜ ವಿಜ್ಞಾನ ವಿಷಯಗಳ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಹುದಾದ 8 ಅಂಶಗಳ ತಿದ್ದುಪಡಿಗೆ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲದೆ ಆಯಾ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯ ಬೋಧನೆಯನ್ನು ಶೈಕ್ಷಣಿಕ ಸಾಲಿನಿಂದ ಕೈಬಿಡುವಂತೆ ಸುತ್ತೋಲೆ ಹೊರಡಿಸಿದೆ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಮಂತ್ರಿ ದೇವೆಗೌಡರು ನನಗೆ ಪಠ್ಯ ಪರಿಷ್ಕರಣೆ ವಿವಾದಗಳ ಬಗ್ಗೆ ಪತ್ರ ಬರೆದು ಮನವಿ ಮಾಡಿದ್ರು. ವರು ಏನು ಪ್ರಸ್ತಾಪ ಮಾಡಿದ್ರೋ ಅವೆಲ್ಲದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ. ಪತ್ರದ ಮುಖೇನ ಅವರಿಗೆ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ರು.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಸದ್ಯ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ತೆರೆ ಎಳೆದು ಬೀಸೋ ದೊಣ್ಣೆಯಿಂದ ಪಾರಾಗಿದೆ. ಆದ್ರೆ ಇದು ಮತ್ತೊಂದು ಹೊಸ ಅಧ್ಯಾಯದ ಆರಂಭ ಅಷ್ಟೇ ಎನ್ನುತ್ತಿದ್ದಾರೆ ತಜ್ಞರು. ಈಗಾಗ್ಲೆ ಶೇ. 60% ಪರಿಷ್ಕೃತ ಪುಸ್ತಕಗಳು ಮಕ್ಕಳ ಕೈ ಸೇರಿವೆ. ಅದನ್ನ ವಾಪಸ್ ಪಡೆದು ತಿದ್ದುಪಡಿ ಪಠ್ಯ ಪ್ರಿಂಟ್ ಮಾಡಿ ಮಕ್ಕಳಿಗೆ ಕೊಡೋದ್ಯಾವಾಗ ಅನ್ನೋದೇ ಯಕ್ಷ ಪ್ರಶ್ನೆ.
ವರದಿ - ಗಣೇಶ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
28/06/2022 05:29 pm