ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ಆರಂಭವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಕೆಲವು ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಯಶಸ್ವಿಯಾಗಿ ನಡೆದಿದೆ. ಈ ಮಧ್ಯೆಯೇ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ದ್ವಿತೀಯ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶ ತಡವಾಗಲ್ಲ. ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈವರೆಗೆ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಒಂದೊಂದು ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಮಾಡಲಾಗುತ್ತಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಪಿಯು ಮಂಡಳಿ ನಿರ್ದೇಶಕ ಆರ್.ರಾಮಚಂದ್ರನ್, 'ಕಳೆದ ವರ್ಷ ಕೊರೊನಾದಿಂದ ಫಲಿತಾಂಶ 1 ತಿಂಗಳು ತಡವಾಗಿತ್ತು. ಪ್ರತಿ ವರ್ಷ ಮಾರ್ಚ್, ಏಪ್ರಿಲ್‌ನಲ್ಲಿ ಪಿಯು ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಪಿಯು ಫಲಿತಾಂಶ ಬೇಗ ನೀಡಲು ರಜಾ ದಿನಗಳಲ್ಲೂ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ. ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರ ನಿಯೋಜನೆ ಮಾಡಲಾಗಿದೆ. ಮೇ 20ರಿಂದ ಜೂನ್ 15ರೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ಉನ್ನತ ಶಿಕ್ಷಣಕ್ಕೆ ಹೋಗಲು ವಿದ್ಯಾರ್ಥಿಗಳಿಗೆ ತೊಂದ್ರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತ್ವರಿತಗತಿಯಲ್ಲಿ ರಿಸಲ್ಟ್ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.
PublicNext
25/04/2022 12:19 pm