ನವದೆಹಲಿ: 2021-2022 ನೇ ಶೈಕ್ಷಣಿಕ ವರ್ಷದ ನೀಟ್-ಪಿಜಿ (NEET-PG) ಕೌನ್ಸಿಲಿಂಗ್ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ನೀಟ್ ಸ್ನಾತಕೋತ್ತರ ಕೌನ್ಸಿಲಿಂಗ್ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಶುಕ್ರವಾರ ತೀರ್ಪು ಹೊರಹಾಕಿದ್ದ ಸುಪ್ರೀಂಕೋರ್ಟ್, ಸದ್ಯ ಇರುವಂತೆ ಆಲ್ ಇಂಡಿಯಾ ಕೋಟಾ ಸೀಟ್ಗಳಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ.27 ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ (EWS) ಶೇ.10ರಂತೆ ಮೀಸಲಾತಿ ಇರಬೇಕು ಎಂದು ಹೇಳಿ, ನೀಟ್ ಪಿಜಿ ಕೌನ್ಸಿಲಿಂಗ್ ಪ್ರಾರಂಭಕ್ಕೆ ಅನುವು ಮಾಡಿಕೊಟ್ಟಿತ್ತು. ಅದಾದ ಎರಡೇ ದಿನದಲ್ಲಿ ಆರೋಗ್ಯ ಸಚಿವರು ಟ್ವೀಟ್ ಮಾಡಿ, ನೀಟ್ ಪಿಜಿ ಕೌನ್ಸಿಲಿಂಗ್ ದಿನಾಂಕ ಘೋಷಣೆ ಮಾಡಿದ್ದಾರೆ.
ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು "ತುರ್ತು ಅಗತ್ಯವಿದೆ" ಎಂದು ನ್ಯಾಯಾಲಯ ಹೇಳಿತ್ತು. ಭಾನುವಾರ 2021-2022ರ ನೀಟ್-ಪಿಜಿ ಕೌನ್ಸೆಲಿಂಗ್ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.
PublicNext
09/01/2022 02:52 pm