ಬೆಂಗಳೂರು: ಬರೋಬ್ಬರಿ ಒಂದೂವರೆ ವರ್ಷಗಳಿಂದ ಶಾಲೆ- ಕಾಲೇಜುಗಳ ಮುಖವನ್ನೇ ನೋಡದ ವಿದ್ಯಾರ್ಥಿಗಳಿಗೆ ಇಂದು ಶುಭ ದಿನ. ಇಂದಿನಿಂದ ರಾಜ್ಯಾದ್ಯಂತ 9ರಿಂದ 12ನೇ ತರಗತಿಗಳು ಆರಂಭವಾಗಲಿದ್ದು, ಶಿಕ್ಷಣ ಇಲಾಖೆಯೂ ಸಕಲ ಸಿದ್ಧತೆ ನಡೆಸಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳಲ್ಲಿ 9-12ನೇ ತರಗತಿಗಳು ಆರಂಭವಾಗಲಿದೆ. 26 ಜಿಲ್ಲೆಗಳಲ್ಲೂ ಶಾಲಾ-ಕಾಲೇಜು ಆರಂಭಕ್ಕೆ ತಯಾರಿ ಆಗಿದೆ. ಮೊದಲ ಹಂತವಾಗಿ 9-12 ನೇ ತರಗತಿವರೆಗೆ ಇಂದಿನಿಂದ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತುಮಕೂರಿನ ಹೆಗ್ಗರೆಯ ಸಿದ್ದಾರ್ಥ ಪ್ರೌಢಶಾಲೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಕಡ್ಡಾಯ. ಮುಂದಿನ ಹಂತದಲ್ಲಿ 1ರಿಂದ 8ನೇ ತರಗತಿ ಆರಂಭಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಶಾಲೆ ಆರಂಭಕ್ಕೆ ಮಾರ್ಗಸೂಚಿ:
* 9 ಮತ್ತು 10ನೇ ತರಗತಿಗಳಿಗೆ ಆರಂಭದಲ್ಲಿ ಅರ್ಧ ದಿನ ಭೌತಿಕ ತರಗತಿ.
( ಸೋಮ-ಶುಕ್ರವಾರದವರೆಗೆ ಬೆ.10ರಿಂದ ಮ.1.30ರವರೆಗೂ, ಶನಿವಾರ ಮ. 12.30ರವರೆಗೆ ಕ್ಲಾಸ್)
* 15 ರಿಂದ 20 ಮಕ್ಕಳನ್ನು ಒಂದು ಗುಂಪಾಗಿ ವಿಂಗಡಿಸಿ ಭೌತಿಕ ತರಗತಿ ನಡೆಸಬೇಕು.
* ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ.
* ಪತ್ರದಲ್ಲಿ ಮಗುವಿಗೆ ಸೋಂಕು ಲಕ್ಷಣ ಇಲ್ಲ ಎಂಬುದನ್ನು ದೃಢೀಕರಿಸಿರಬೇಕು.
* ತರಗತಿಗಳಿಗೆ ಮಕ್ಕಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಕ್ಲಾಸ್‍ಗೂ ಹಾಜರಾಗಬಹುದು.
* ಬೆಂಚ್‍ಗಳ ಉದ್ದ ಆಧರಿಸಿ ಒಬ್ಬರು ಅಥವಾ ಇಬ್ಬರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.
* ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರ ತರಬೇಕು.
* 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್, ಜೊತೆಗೆ ಫೇಸ್‍ಶೀಲ್ಡ್ ಧರಿಸಬೇಕು.
* ಶಿಕ್ಷಕರು ಕನಿಷ್ಠ 1 ಡೋಸ್ ಆದರೂ ಪಡೆದಿರಲೇಬೇಕು. ಸೋಂಕು ಲಕ್ಷಣ ಇದ್ದಲ್ಲಿ ರಜೆ ಪಡೆಯಬೇಕು.
PublicNext
23/08/2021 07:26 am