ಬೆಂಗಳೂರು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದುಗೊಳಿಸದೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪರೀಕ್ಷೆ ಮಾಡಲಾಗಿತ್ತು. ಈ ಮೂಲಕ ರಾಜ್ಯ ಸರ್ಕಾರ ಸವಾಲಿನ ನಿರ್ಧಾರ ತೆಗೆದುಕೊಂಡು ಜುಲೈ 23ರಂದು ಪರೀಕ್ಷೆ ಯಶಸ್ವಿಯಾಗಿ ಮುಗಿಸಿತ್ತು.
ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್, ಫಲಿತಾಂಶವನ್ನು ಆಗಸ್ಟ್ 10ರೊಳಗೆ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ ಇದೀಗ ಸಚಿವ ಸಂಪುಟ ಬದಲಾಗಿದ್ದು, ಸಚಿವರ ನೇಮಕವಾಗಬೇಕಿದೆ. ಈ ಮಧ್ಯೆ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಗುರುವಾರ ಮಂಡಳಿ ಸದಸ್ಯರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಫಲಿತಾಂಶವನ್ನು ಪ್ರಕಟಿಸಲು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.
ಈ ಸಭೆಯ ನಡಾವಳಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದು, ಅವರಿಂದ ಅನುಮತಿಗಾಗಿ ಮಂಡಳಿಯು ಕಾಯುತ್ತಿದ್ದು, ಬಹುಶಃ ಒಂದೆರಡು ದಿನಗಳಲ್ಲಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಈ ವರ್ಷ 8,19,694 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಈಗಾಗಲೇ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
ಫಲಿತಾಂಶ ನೋಡಲು ಹೀಗೆ ಮಾಡಿ:
1. ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ sslc.karnataka.gov.in ಕ್ಲಿಕ್ ಮಾಡಿ
2. ಸ್ಕ್ರೀನ್ನಲ್ಲಿ ರಿಸಲ್ಟ್ ಲಿಂಕ್ ಕಾಣಿಸಿಕೊಳ್ಳುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ
3. ನಿಮ್ಮ ರೋಲ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ
4. ರೋಲ್ ನಂಬರ್ ಜೊತೆಗೆ ಅಲ್ಲಿ ಕೇಳುವ ನಿಮ್ಮ ಇತರೆ ಮಾಹಿತಿಗಳನ್ನೂ ತುಂಬಿರಿ
5. ಫಲಿತಾಂಶವನ್ನು ವೀಕ್ಷಿಸಲು ನಿಮ್ಮ ಮಾಹಿತಿಯನ್ನು ಸಬ್ಮಿಟ್ ಮಾಡಿ
PublicNext
06/08/2021 09:39 am