ನವದೆಹಲಿ: ಕೊರೊನಾ ವೈರಸ್, ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ಕಾಲೇಜು ತರಗತಿಗಳು ನವೆಂಬರ್ 1ರಿಂದ ಶುರುವಾಗಲಿದೆ.
ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಂಕ್ ಅವರು ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಪ್ರಸ್ತಾವಿತ ಮಾರ್ಗಸೂಚಿಯನ್ನು ಟ್ವೀಟ್ ಮಾಡಿದ್ದಾರೆ. ಪ್ರಕಟಣೆಯ ಪ್ರಕಾರ, ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈ ಮೂಲಕ ನವೆಂಬರ್ 1ರಿಂದ ಕಾಲೇಜು ತರಗತಿಗಳು ಪ್ರಾರಂಭವಾಗಲಿದ್ದು, ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ 8 ರಿಂದ 23ರ ನಡುವೆ ನಡೆಯಲಿದೆ. ಎರಡನೇ ಸೆಮಿಸ್ಟರ್ ಏಪ್ರಿಲ್ 5ರಿಂದ ಆರಂಭವಾಗಲಿದ್ದು, ಪರೀಕ್ಷೆಗಳು ಆಗಸ್ಟ್ನಲ್ಲಿ ನಡೆಯಲಿವೆ. ಹಾಗೆ, ಮೊದಲ ವರ್ಷದ ಕೋರ್ಸ್ ಆಗಸ್ಟ್ 30ಕ್ಕೆ ಪೂರ್ಣಗೊಳ್ಳಲಿದೆ.
ಅಷ್ಟೇ ಅಲ್ಲದೆ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೂ ಪ್ರಕಟಣೆಯಲ್ಲಿ ಅನುಕೂಲ ಕಲ್ಪಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಅಡ್ಮಿಷನ್ ಕ್ಯಾನ್ಸಲ್ ಮಾಡಿದರೆ ಅಥವಾ ಬೇರೆ ಕಾಲೇಜುಗಳಿಗೆ ಪ್ರವೇಶ ಬಯಸಿದರೆ ಅವರು ಕಟ್ಟಿರುವ ಪೂರ್ಣಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಹಿಂದಿರುಗಿಸಬೇಕು. ಈ ವಿನಾಯಿತಿ ನವೆಂಬರ್ 30ರ ವರೆಗೆ ಮಾತ್ರ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
PublicNext
22/09/2020 04:47 pm