ಹುಬ್ಬಳ್ಳಿ : ಕಾನೂನು ಇಂಟರ್ ಮೀಡಿಯೇಟ್ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿಲ್ಲ.ಅಖಿಲ ಭಾರತ ವಕೀಲ ಮಂಡಳಿಯ ನಿಯಮಾವಳಿಗಳಂತೆ ಕೋವಿಡ್-19 ರ ಪರಿಸ್ಥಿತಿ ಸುಧಾರಿಸಿದ ನಂತರ ಪರೀಕ್ಷೆಗಳನ್ನು ನಡೆಸಲಾಗುವುದು.
ಅಖಿಲ ಭಾರತ ವಕೀಲ ಮಂಡಳಿಯ ಆದೇಶದ ಅನ್ವಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಈಗಾಗಲೇ ಇಂಟರ್ ಮೀಡಿಯೇಟ್ ಸೆಮಿಸ್ಟರ್ ಪರೀಕ್ಷೆಗಳನ್ನು ಹೊರತುಪಡಿಸಿ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ ಎಂದು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ತನ್ನ ಅಧೀನದಲ್ಲಿ ಬರುವ ಎಲ್ಲ ಕಾನೂನು ಮಹಾವಿದ್ಯಾಲಯಗಳಿಗೆ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಕಾನೂನು ವಿವಿ ಕುಲಸಚಿವ (ಮೌಲ್ಯಮಾಪನ ) ಡಾ: ಜಿ.ಬಿ ಪಾಟೀಲ್, ಅಖಿಲ ಭಾರತ ವಕೀಲ ಮಂಡಳಿಯ ( 05-10-2020 ಹಾಗೂ 01-11-2020) ಪತ್ರಿಕಾ ಪ್ರಕಟನೆಯಲ್ಲಿಯೂ ಸಹ ಇದನ್ನು ಉಲ್ಲೇಖಿಸಿದೆ. ಅದರಂತೆ ಎಲ್ಲ ಇಂಟರ್ ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ನಡಸದೆ ಮುಂದಿನ ವರ್ಷಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಆದರೆ ವಿದ್ಯಾರ್ಥಿಗಳು ಕಾಲೇಜುಗಳು ಪುನರಾರಂಭಗೊಂಡು ಕೋವಿಡ್-19 ರ ಪರಿಸ್ಥಿತಿ ಸುಧಾರಿಸಿದ ನಂತರ ಪರೀಕ್ಷೆಗೆ ಹಾಜರಾಗಬೇಕಾಗುವದೆಂದು ತಿಳಿಸಿದ್ದಾರೆ.
ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೆ ಪರೀಕ್ಷೆಗಳ ತಯಾರಿ ಮಾಡಿಕೊಳ್ಳುವತ್ತ ತಮ್ಮ ಗಮನ ಹರಿಸಲು ಸಲಹೆ ನೀಡಿದ್ದಾರೆ.
PublicNext
09/11/2020 05:11 pm