ದಾವಣಗೆರೆ: ಬಿಜೆಪಿ ಕಾರ್ಯಕರ್ತರು ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ಮನಸ್ತಾಪಗಳನ್ನು ಬದಿಗೊತ್ತಿ ಮುಂದಿನ ವಿಧಾನಸಭೆ ಚುನಾವಣೆಗೆ ಸಂಘಟಿತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.
ಇಲ್ಲಿನ ರಾಷ್ಟ್ರೋತ್ಥಾನ ಶಾಲೆಯಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾವತಿಯಿಂದ ಹಿಂದುಳಿದ ವರ್ಗಗಳ ಜಾಗೃತಿ ಸಂಯೋಜಕರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
'ಪಕ್ಷದ ಸಮಾವೇಶಕ್ಕೆ ಬರೀ ಜನರಷ್ಟೇ ಸೇರಿದರೆ ಸಾಲದು. ಸಮಾವೇಶದಲ್ಲಿ ಪಾಲ್ಗೊಂಡ ಜನರು ಮತಗಳಾಗಿ ಪರಿವರ್ತನೆಯಾಗಬೇಕು. ಸಮಾವೇಶದಲ್ಲಿ ಸೇರುವ ಜನರೆಲ್ಲಾ ಮತ ಹಾಕುತ್ತಾರೆ ಎಂಬುದು ಭ್ರಮೆ. ನಮ್ಮ ಪಕ್ಷದಲ್ಲಿ ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಂಘಟಿತರಾಗಿ ಶಕ್ತಿ ಪ್ರದರ್ಶಿಸಬೇಕು' ಎಂದು ಸಲಹೆ ನೀಡಿದರು.
'ಅ.30ರಂದು ಕಲಬುರ್ಗಿಯಲ್ಲಿ ನಡೆಯುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮುಖಂಡರು ಒಂದು ಸಂದೇಶ ರವಾನಿಸಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು' ಎಂದು ಕರೆ ನೀಡಿದರು.
PublicNext
01/10/2022 10:24 pm