ವರದಿ: ಅಣ್ಣಪ್ಪ ಬಿ.ಕುಂದುವಾಡ
ದಾವಣಗೆರೆ: ಅದು ಇಡೀ ನಗರಕ್ಕೆ ಜೀವನಾಡಿಯಾಗಿರುವ ಕೆರೆ. ಆ ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಕೆರೆ ಅಭಿವೃದ್ಧಿ ಮಾಡಲಾಗ್ತಿದೆ. ಆದ್ರೆ ಕಾಮಗಾರಿ ಮಾಡಿದ ಕೆರೆಯಲ್ಲಿ ಬೆಳೆದ ಗಿಡಗಳನ್ನು ಹಾಗು ದೊಡ್ಡ ಗುಂಡಿಗಳನ್ನು ಮುಚ್ಚದೇ ನೀರು ಹರಿಸಲಾಗಿದೆ ಎಂದು ಪರಿಸರ ಪ್ರೇಮಿಗಳ ಆಕ್ರೋಶ ವಾಗಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದಾಗಿನಿಂದಲೂ ದಾವಣಗೆರೆ ನಗರದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಲೇ ಬಂದಿವೆ. ಅವುಗಳ ಜೊತೆ ಕುಂದುವಾಡ ಕೆರೆಯನ್ನು ಕೂಡ ಅಭಿವೃದ್ಧಿ ಪಡಿಸಲು ಕಾಮಗಾರಿ ನಡೆಯುತ್ತಿದೆ. ಈ ಕೆರೆ ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಇಡೀ ನಗರಕ್ಕೆ ಜೀವಜಲವನ್ನು ಒದಗಿಸುತ್ತದೆ.
ಸ್ಮಾರ್ಟಿ ಸಿಟಿ ಯೋಜನೆಯಡಿ 15 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅದು ಈಗ ಮುಕ್ತಾಯ ಹಂತಕ್ಕೆ ತಲುಪಿದೆ. ಆದರೆ ಹಣ ಲಪಟಾಯಿಸಲು ಹಾಗೂ ಅವಧಿ ಮುಕ್ತಾಯವಾಗುತ್ತದೆ ಎಂದು ತರಾತುರಿಯಲ್ಲಿ ಕಾಮಗಾರಿ ಮಾಡಲಾಗ್ತಿದೆ. ಕೆರೆಯಲ್ಲಿ ಹೂಳು ಹಾಗೇ ಇದೆ. ಜೊತೆಗೆ ಸರಿಯಾಗಿ ಕೆರೆಯ ಸುತ್ತ ಕಲ್ಲು ಜೋಡಣೆ ಮಾಡದೇ ಈಗ ಕೆರೆಗೆ ನೀರು ಬಿಟ್ಟಿದ್ದಾರೆ. ಅಲ್ಲದೇ ವಿಸ್ತಾರವಾದ ಕೆರೆ ಈಗ ಚಿಕ್ಕದಾಗಿದ್ದು, ಕಡಿಮೆ ನೀರು ಸಂಗ್ರಹವಾಗುವಂತೆ ಮಾಡಿ, ಬಿಡುಗಡೆಯಾದ ಹಣವನ್ನು ದುಂದುವೆಚ್ಚ ಮಾಡಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಂಡಿ ರವೀಂದ್ರ ಮಲ್ಲಾಪುರ, ಹದಿನೈದು ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಂಡಿದ್ದು, ಇನ್ನು ಕೆರೆ ಮಣ್ಣನ್ನು ಕೆರೆ ಏರಿಗೆ ಹಾಕಿದ್ದರಿಂದ ಕೆರೆಯ ಸುತ್ತಳತೆ ಕಡಿಮೆಯಾಗಿಲ್ಲ, ಬೇಸಿಗೆಯಲ್ಲಿ ನೀರು ಶೇಖರಿಸಲು ಕೆರೆಯಲ್ಲಿ ಗುಂಡಿಗಳನ್ನು ಹಾಗೇ ಬಿಡಲಾಗಿದೆ. ಇನ್ನು ಗಿಡಗಳು ಕೂಡ ನೀರು ಬಂದ್ರೆ ಕೊಳೆತು ಹೋಗುತ್ತವೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
PublicNext
29/09/2022 06:02 pm