ದಾವಣಗೆರೆ: ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ಚೇತನ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.
ಭಾನುವಾರ ನಗರದ ಶ್ರೀರಾಮನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಚರಕ ನೆಯುವ ಮೂಲಕ ಹಾಗೂ ಇಬ್ಬರು ಮಹಾನಿಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಚಳುವಳಿ ಹಾಗೂ ಹೋರಾಟಗಳನ್ನು ರೂಪಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿದರು. ಪ್ರಸ್ತುತ ದಿನಮಾನಗಳಲ್ಲಿ ಮಹಾತ್ಮ ಗಾಂಧಿಯವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ಸಾಗೋಣ ಎಂದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಗಾಂಧೀಜಿ ಸತ್ಯ, ಸಮಾನತೆ, ಅಹಿಂಸೆ, ಶಾಂತಿಯ ಬಹುದೊಡ್ಡ ಪ್ರತಿಪಾದಕರಾಗಿದ್ದಾರೆ. ಇಂದು ವಿಶ್ವದಾದ್ಯಂತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರ ಜೀವನ ಮತ್ತು ತತ್ವಾದರ್ಶಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ಆತ್ಮಕಥೆಯನ್ನು ಓದಿ ತಿಳಿಯಬೇಕಾಗಿದೆ. ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ದೇಶೀಯ ಗುಡಿ ಕೈಗಾರಿಕೆಗಳ ಕಲ್ಯಾಣಕ್ಕಾಗಿ ಶ್ರಮಿಸಿದರು.
ದೇಶಕ್ಕೆ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾದದ್ದು, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳ ಮೂಲಕ ದೇಶದಲ್ಲಿ ಪ್ರಾಮಾಣಿಕವಾದ ಆಡಳಿತ ನೀಡಿದ ಅಪರೂಪದ ಪ್ರಧಾನಿಯಾಗಿದ್ದಾರೆ. ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ನುಡಿದಂತೆ ಬದುಕಿ ತೋರಿಸಿದ ನಾಯಕರಾಗಿದ್ದಾರೆ ಎಂದರು.
ಶಾಸಕ ರವೀಂದ್ರನಾಥ್ ಮಾತನಾಡಿ, ಗಾಂಧೀಜಿಯವರು ಅಹಿಂಸೆ ಮತ್ತು ತ್ಯಾಗದ ಮನೋಭಾವ ಹೊಂದಿರುವ ವ್ಯಕ್ತಿ, ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಅವರ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ದೇಶದಲ್ಲಿ ಪ್ರಾಮಾಣಿಕ ಹಾಗೂ ಅತ್ಯಂತ ಸರಳವಾಗಿದ್ದ ಪ್ರಧಾನಿಯಾದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಕೂಡ ತಮ್ಮ ಒಂದು ವರ್ಷದ ಅಧಿಕಾರಾವಧಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ದೇಶವನ್ನು ಅಭಿವೃದ್ಧಿಯತ್ತ ಸಾಗಿಸಲು ಶ್ರಮ ಪಟ್ಟಿದ್ದಾರೆ ಎಂದರು.
PublicNext
02/10/2022 07:24 pm