ದಾವಣಗೆರೆ: ಅಡುಗೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯೇ 70 ವರ್ಷದ ವಯೋವೃದ್ಧ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ದಾವಣಗೆರೆಯ ರಾಮಕೃಷ್ಣ ಹೆಗಡೆ ನಗರದಲ್ಲಿ ನಡೆದಿದೆ.
ಅಖ್ತರ್ ರಜಾ ಸರ್ಕಲ್ ರಿಂಗ್ ರಸ್ತೆಯ ಹೆಗಡೆ ನಗರದ ನಿವಾಸಿ ಶಾಕಿರಾ ಬೀ (70) ಕೊಲೆಯಾದ ವೃದ್ಧೆ. ಪತಿ ಚಮನ್ ಸಾಬ್ (80) ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.
ಶಾಕೀರಾ ಬೀ ಮತ್ತು ಚಮನ್ ಸಾಬ್‌ಗೆ ಮಕ್ಕಳಿದ್ದರೂ ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಡುಗೆ ಇತರೆ ವಿಚಾರವಾಗಿ ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈದ್ ಮಿಲಾದ್ ದಿನವೂ ಅಡುಗೆ ವಿಚಾರಕ್ಕೆ ಜಗಳ ನಡೆದಿದ್ದು, ವೃದ್ಧೆಯ ಕೊಲೆಯಲ್ಲಿ ಮುಕ್ತಾಯವಾಗಿದೆ. ವೃತ್ತ ನಿರೀಕ್ಷಕ ಕೆ.ಎನ್. ಗಜೇಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/10/2022 09:14 pm