ಗದಗ: ಇತ್ತೀಚಿಗೆ ಜಾತಿ ಧರ್ಮಗಳ ಸಂಘರ್ಷ ಹೆಚ್ಚಾಗ್ತಿವೆ. ಧರ್ಮ ದೇಹಕ್ಕೆ ಅನ್ನೋ ಶಬ್ಧ ಸಾಮಾನ್ಯವಾಗಿಬಿಟ್ಟಿದೆ. ಜಾತಿ ಜಾತಿಗಳ ಹೆಸರಿನಲ್ಲಿ ಗದ್ದಲ, ಗಲಾಟೆಗಳು ನಡೆಯುತ್ತಿವೆ. ಆದ್ರೆ ಗದಗ ಜಿಲ್ಲೆಯ ಗ್ರಾಮವೊಂದು ಸಾಮರಸ್ಯತೆಗೆ ಸಾಕ್ಷಿಯಾಗಿದೆ. ಇಲ್ಲಿ ಹಲವು ವರ್ಷಗಳಿಂದ ಹಿಂದೂ ಮುಸ್ಲಿಂ ಬಾಂಧವರು ಸೇರಿ ಗಣೇಶನನ್ನ ಪ್ರತಿಷ್ಠಾಪನೆ ಮಾಡಿ ಗಣೇಶ್ ಚತುರ್ಥಿ ಹಬ್ಬ ಆಚರಿಸುತ್ತಾರೆ. ಈ ಮೂಲಕ ನಾಡಿಗೆ ಮತ್ತು ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ.
ಗಣಪತಿ ಪ್ರತಿಷ್ಠಾಪನೆ ಬಳಿಕ ನಿತ್ಯವೂ ಹಿಂದೂ ಮುಸ್ಲಿಂ ಮಹಿಳೆಯರು, ಪುರುಷರು ಒಟ್ಟುಗೂಡಿ ಪೂಜೆ ಮಾಡ್ತಾರೋ ದೃಶ್ಯ ಕಂಡು ಬರೋದು ಗದಗ ತಾಲೂಕಿನ ಕಳಸಾಪುರ ಗ್ರಾಮದಲ್ಲಿ.ರಾಜ್ಯದ ಹಲವೆಡೆ ಈಗ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ವರ್ಷಗಳಿಂದ ಒಂದಿಲ್ಲೊಂದು ವಿಷಯಕ್ಕೆ ಕೋಮು ಭಾವನೆ ಕೆರಳಿಸುವ ಪ್ರಕರಣಗಳು ನಡೀಯುತ್ತಲೇ ಇವೆ. ಆದ್ರೆ, ಈ ಗ್ರಾಮದಲ್ಲಿ ಮಾತ್ರ ಇದಕ್ಕೆಲ್ಲವೂ ಅಪವಾದವಾಗಿದೆ ಕಳಸಾಪೂರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಗಣೇಶನನ್ನ ಪ್ರತಿಷ್ಠಾಪನೆ ಮಾಡ್ತಾರೆ. ಸತತ ಸುಮಾರು 12 ವರ್ಷದಿಂದ ಅಂಜುಮಾನ್ ಏ -ಇಸ್ಲಾಂ ಹಾಗೂ ಈಶ್ವರ ದೇವಾಲಯ ಕಮಿಟಿಯವರು ಜಂಟಿಯಾಗಿ ಏಕದಂತನನ್ನ ಪ್ರತಿಷ್ಟಾಪಿಸಿ ಪೂಜೆ ಮಾಡ್ತಾರೆ. ಒಟ್ಟಿಗೆ ಹಬ್ಬ ಆಚರಿಸೋ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಜಾತಿ ಬೇಧ ಮರೆತು ಇಲ್ಲಿ ಐದು ದಿನಗಳ ಕಾಲ ವಿನಾಯಕನಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ. ಹಿಂದೂ-ಮುಸ್ಲಿಂ ಸಮಾಜದ ಮಹಿಳೆಯರು ಪೂಜೆಯಲ್ಲಿ ಭಾಗಿಯಾಗ್ತಾರೆ. ಇದಕ್ಕೆಲ್ಲಾ ಕಾರಣವಾಗಿರೋ ಅಂಜುಮಾನ್ ಹಾಗೂ ಈಶ್ವರ ದೇವಾಲಯದ ಕಮಿಟಿ ಸದಸ್ಯರು. ಅದರಲ್ಲೂ ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು, ಹಿಂದೂಗಳ ಜೊತೆ ಸೇರಿ ವಿಘ್ನನಿವಾರಕನನ್ನ ಪ್ರತಿಷ್ಠಾಪನೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ನಿತ್ಯವೂ ಇವರೆಲ್ಲಾ ಸಾಮೂಹಿಕವಾಗಿ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಳ್ತಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಿಂದೂ ಮುಸ್ಲಿಂ ಅನ್ನೋ ಬೇಧ ಇಲ್ಲ. ಇಲ್ಲಿ ನಾವೇಲ್ಲಾ ಒಟ್ಟಾಗಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಹಿಂದೂ ಮುಸ್ಲಿಂ ಎಲ್ಲರೂ ಗಣೇಶನ ಹಬ್ಬ ಆಚರಣೆ ಮಾಡ್ತೀವಿ ಅಂತ ಹೇಳ್ತಾರೆ.
PublicNext
03/09/2022 10:51 pm