ಬೆಂಗಳೂರು: ಅ. 7 ರಿಂದ 15ರವರೆಗೆ ನಡೆಯಲಿರುವ ನಾಡಹಬ್ಬ ದಸರಾ, ದುರ್ಗಾ ಪೂಜೆ ಆಚರಣೆ ವೇಳೆ ಹೆಚ್ಚು ಜನ ಸೇರುವಂತಿಲ್ಲ ಎಂದು ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಕೂಡಾ ದಸರಾವನ್ನು ಸರಳವಾಗಿ ಆಚರಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮಂಗಳವಾರ ಮಾರ್ಗಸೂಚಿ ಹೊರಡಿಸಿದ್ದಾರೆ.
ಮೈಸೂರು ದಸರಾ ಹಬ್ಬದ ಆಚರಣೆಯನ್ನು ದೃಶ್ಯ ಸಂವಹನ (ವರ್ಚುವಲ್) ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಿರುವುದರಿಂದ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. 7ರಂದು ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಗಣ್ಯರಿಂದ ಮೈಸೂರು ದಸರಾ ಉದ್ಘಾಟನೆ ನಡೆಯಲಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಕಲಾವಿದರು, ಮಾಧ್ಯಮದವರು ಸೇರಿ 100 ಜನರಿಗೆ ಮಾತ್ರ ಅವಕಾಶ.
15ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂ ಸವಾರಿಯಲ್ಲಿ 500 ಜನ, 7ರಿಂದ 15ರವರೆಗೆ ಅರಮನೆ ಆವರಣದಲ್ಲಿ ಸಂಜೆ ನಡೆಯಲಿರುವ 2 ಗಂಟೆ ಅವಧಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗರಿಷ್ಠ 500 ಜನರಿಗೆ ಅನುಮತಿ ನೀಡಲಾಗಿದೆ.
ಆಚರಣೆಯಲ್ಲಿ ಭಾಗವಹಿಸುವವರು ಅ. 4ರ ನಂತರ ಕೋವಿಡ್ ತಪಾಸಣೆ (ಆರ್ ಟಿಪಿಸಿಆರ್) ನಡೆಸಿ ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಕೋವಿಡ್ ನಿಯಮ ಪಾಲಿಸದವರಿಗೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು.
PublicNext
05/10/2021 12:09 pm