ಸ್ಪೆಷಲ್ ಸ್ಟೋರಿ
ದಾವಣಗೆರೆ: ರಾಜ್ಯದಲ್ಲಿ ಕೋಮುಸಾಮರಸ್ಯ ಕದಡಿರುವ ಇಂಥ ವೇಳೆಯಲ್ಲಿ ಇಲ್ಲೊಂದು ಗ್ರಾಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಮಾತ್ರವಲ್ಲ, ದೇಶಕ್ಕೆ ಮಾದರಿ ಎನ್ನುವಂತಿದೆ. ಕಾರಣ ಇಲ್ಲಿ ಮುಸ್ಲಿಂರು ಯಾರೂ ಇಲ್ಲ. ಹಿಂದುಗಳೇ ಮುಸ್ಲಿಂ ದೇವರನ್ನ ಪೂಜೆ ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಮುಸ್ಲಿಂ ದರ್ಗಾಕ್ಕೆ ಹಿಂದುಗಳು ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ತಾಣವಾಗಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿ ಮಾರ್ಪಟ್ಟಿದೆ. ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷವೇ ಹೆಚ್ಚಾಗುತ್ತಿದೆ. ಅಂತಹದರಲ್ಲಿ ಈ ನಾಗೇನಹಳ್ಳಿ ದೇಶಕ್ಕೆ ಹಿಂದು ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ. ಕಾರಣ, ಈ ಗ್ರಾಮದಲ್ಲಿ ಹಿಂದುಗಳು ಮಾತ್ರ ಇದ್ದಾರೆ. ಆದರೆ, ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬನ ಸಮಾಧಿ ಇದ್ದು, ಆ ಸಮಾಧಿಯನ್ನ ಹಿಂದುಗಳೇ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ಅಲ್ಲದೇ, ಆ ದರ್ಗಾಗೆ ಪಕ್ಕದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂದು ಹೆಸರನ್ನು ಇಟ್ಟಿದ್ದಾರೆ.
ಹಲವು ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಸಾಬ್ ಎಂಬ ಪವಾಡ ಪುರುಷನೊಬ್ಬ ಕೇರಳದಿಂದ ಆಗಮಿಸಿದ್ದ. ಬಹುಕಾಲ ವರ್ಷ ಇಲ್ಲಿಯೇ ತಂಗಿದ್ದ ಆ ಜಮಾಲ್ ಸಾಬ್ ಸ್ಥಳೀಯರಿಗೆ ಹಲವಾರ ಪವಾಡಗಳನ್ನು ಮಾಡಿ ತೋರಿಸಿದ್ದ. ಆನಾರೋಗ್ಯ ಪೀಡಿತ ಜನ ಮತ್ತು ಜಾನುವಾರುಗಳ ರೋಗ ರುಜಿಗಳನ್ನು ತನ್ನ ಪವಾಡದಿಂದ ಹೋಗಲಾಡಿಸಿದ್ದ. ಹೀಗಾಗಿ, ಆಗಿನ ಜನರು ಜಮಾಲ್ ನನ್ನು ಸ್ವಾಮಿ ಎಂದೇ ನಂಬಿದ್ದರು. ಅಲ್ಲದೇ, ಆತ ಕಾಲಾನಂತರ ಆತನ ಸಮಾಧಿಯನ್ನು ಅಂದಿನಿಂದ ಇಂದಿನವರೆಗೂ ಪೂಜೆ ಮಾಡುತ್ತಿದ್ದಾರೆ. ಇನ್ನು, ಪ್ರತಿ ವರ್ಷ ಜಮಾಲ್ ಸ್ವಾಮಿ ಉರುಸ್ ಕೂಡ ನಡೆಯುತ್ತಿದ್ದು, ಅದನ್ನು ಸ್ಥಳೀಯ ಹಿಂದುಗಳೇ ಆಚರಿಸುತ್ತಿದ್ದಾರೆ. ಉರುಸ್ ಕೂಡ ನಡೆದಿರುವುದು ವಿಶೇಷ.
ಇಲ್ಲಿಯ ಹಿಂದು ಜನರೇ ಆತನಿಗೆ ಪ್ರಸಾದ ಮತ್ತು ಮಾಂಸದೂಟ ಪ್ರಸಾದ ಅರ್ಪಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಉರುಸ್ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಈ ಉರುಸ್ ನಲ್ಲಿ ಸುತ್ತಮುತ್ತಲಿನ ನೂರಾರು ಮುಸ್ಲಿಂ ಬಾಂಧವರು ಕೂಡ ಭಾಗವಹಿಸುತ್ತಾರೆ.
ಇನ್ನು, ಜಮಾಲ್ ಹೆಸರಲ್ಲಿ ಈಗಲೂ ಹಲವಾರು ಪವಾಡಗಳು ನಡೆಯುತ್ತವೆ ಅಂತೆ. ಹೀಗಾಗಿ, ದಾವಣಗೆರೆ ಜಿಲ್ಲೆಯ ನಾನಾ ಭಾಗಗಳ ಹಿಂದು ಮುಸ್ಲಿಂ ಜನರು ಈ ಜಮಾಲ್ ಸ್ವಾಮಿ ಸನ್ನಿಧಿಗೆ ಬಂದು ಆರೋಗ್ಯ, ಕೌಟುಂಬಿಕ ಸಮಸ್ಯೆ, ವಿವಾಹ ಪ್ರಾಪ್ತಿ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಜಮಾಲ್ ಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
PublicNext
27/04/2022 04:05 pm